ದಕ್ಷಿಣಕನ್ನಡ ಹಾಗು ಉಡುಪಿ ಜಿಲ್ಲೆ ಸೇರಿದಂತೆ ಕರಾವಳಿಯಲ್ಲಿ ಸಂತಸ ಸಡಗರ, ಸಂಭ್ರಮದಿಂದ ‘ಈದುಲ್ ಫಿತ್ರ್’ ಹಬ್ಬ ಆಚರಣೆ
ಮಂಗಳೂರು/ಉಡುಪಿ: ದಕ್ಷಿಣಕನ್ನಡ ಹಾಗು ಉಡುಪಿ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ ಪವಿತ್ರ ಬುಧವಾರ ಮುಸ್ಲಿಮರು ಅತ್ಯಂತ ಸಂತಸ ಸಡಗರ, ಸಂಭ್ರಮದಿಂದ ‘ಈದುಲ್ ಫಿತ್ರ್’ ಹಬ್ಬವನ್ನು ಆಚರಿಸಿದರು.
ದ.ಕ. ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಜುಮಾ ಮಸೀದಿ, ಈದ್ಗಾಗಳಲ್ಲಿ ಸಾಮೂಹಿಕ ನಮಾಝ್, ಈದ್ ಖುತ್ಬಾ, ಈದ್ ಸಂದೇಶ, ಪ್ರವಚನ, ಈದ್ ಶುಭಾಶಯ, ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿಯ ಮೂಲಕ ಹಬ್ಬಕ್ಕೆ ಸಂಭ್ರಮ ತಂದರು.
ಈದ್ ನಮಾಝ್-ಖುತ್ಬಾದ ಬಳಿಕ ದಫನ ಭೂಮಿಗೆ ತೆರಳಿ ಅಗಲಿದ ಕುಟುಂಬದ ಸದಸ್ಯರ ಮಗ್ಫಿರತ್‌ಗಾಗಿ ಪ್ರಾರ್ಥಿಸಿದರು. ಹಾಗೇ ಕುಟುಂಬಸ್ಥರು, ಸ್ನೇಹಿತರು, ಸಮೀಪದ ನಿವಾಸಿಗಳ ಮನೆಗೆ ತೆರಳಿ ಈದ್ ಶುಭಾಶಯ ಕೋರಿದರು.
ಜಿಲ್ಲೆಯ ಬಹುತೇಕ ಎಲ್ಲಾ ಮಸೀದಿ-ಈದ್ಗಾಗಳಲ್ಲಿ ವಿಶೇಷ ನಮಾಝ್, ಪ್ರವಚನ ಬಳಿಕ ಪರಸ್ಪರ ಹಸ್ತಲಾಘವ, ಆಲಿಂಗನ ಮೂಲಕ ಹಬ್ಬದ ಶುಭಾಶಯ ವಿನಿಮಯ ಹಾಗೂ ಮನೆಗಳಲ್ಲಿ ಹಬ್ಬದ ಸಂಭ್ರಮ ಕಂಡು ಬಂತು.
ಎಳೆಯ ಮಕ್ಕಳಿಂದ ಹಿಡಿದು ಹಿರಿಯರ ಸಹಿತ ಉಪವಾಸಿಗರು ಹೊಸ ಬಟ್ಟೆಬರೆ ಧರಿಸಿ, ಅತ್ತರ್ ಹಚ್ಚಿ, ವಿಶಿಷ್ಟ ಬಗೆಯ ತಿಂಡಿ-ತಿನಿಸು ತಿಂದು ಹಬ್ಬವನ್ನು ಅತ್ಯಂತ ಶ್ರದ್ಧೆಯಿಂದ ಸಂಭ್ರಮಿಸಿದರು.
ನಗರದ ಬಾವುಟಗುಡ್ಡದ ಈದ್ಗಾ ಜುಮಾ ಮಸ್ಜಿದ್‌ನಲ್ಲಿ ದ.ಕ.ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಖುತ್ಬಾ ಪಾರಾಯಣಗೈದರು. ಬಂದರ್ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬ್ ಅಲ್ಹಾಜ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ ಈದ್ ನಮಾಝ್ ಗೆ ನೇತೃತ್ವ ನೀಡಿದರು.
ಈ ಸಂದರ್ಭ ಬಂದರ್ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಮತ್ತು ಈದ್ಗಾ ಜುಮಾ ಮಸೀದಿಯ ಅಧ್ಯಕ್ಷ ಅಲ್ಹಾಜ್ ಯೆನೆಪೊಯ ಅಬ್ದುಲ್ಲಾ ಕುಂಞಿ, ಉಪಾಧ್ಯಕ್ಷ ಕೆ. ಅಶ್ರಫ್, ಕೋಶಾಧಿಕಾರಿ ಎಸ್.ಎಂ.ರಶೀದ್ ಹಾಜಿ ಮತ್ತಿತರರು ಪಾಲ್ಗೊಂಡಿದ್ದರು.
ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್‌ನಲ್ಲಿ ಖತೀಬ್ ಇಬ್ರಾಹೀಂ ಸಅದಿ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಿತು.
ರಾಜ್ಯ ವಿಧಾನಸಭೆಯ ಸ್ಪೀಕರ್ ಯುಟಿ ಖಾದರ್, ಮಾಜಿ ಶಾಸಕ ಐವನ್ ಡಿಸೋಜ ಈದ್ಗಾ ಮಸೀದಿಗೆ ಭೇಟಿ ನೀಡಿ ಶುಭ ಹಾರೈಸಿದರು.
ಉಡುಪಿಯಲ್ಲಿ ಸಂಭ್ರಮದ ‘ಈದುಲ್ ಫಿತ್ರ್’ ಹಬ್ಬ ಆಚರಣೆ
ಉಡುಪಿ ಜಿಲ್ಲೆಯಾದ್ಯಂತ ಈದುಲ್ ಫಿತ್ರ್ ಹಬ್ಬವನ್ನು ಇಂದು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ಉಡುಪಿ ನಗರ ಕಾಪು, ಬ್ರಹ್ಮಾವರ, ಕುಂದಾಪುರ, ಬೈಂದೂರು, ಹೆಬ್ರಿ, ಕಾರ್ಕಳ ತಾಲೂಕುಗಳ ವಿವಿಧ ಮಸೀದಿಗಳಲ್ಲಿ ವಿಶೇಷ ಈದ್ ನಮಾಝ್ ನೆರವೇರಿಸಲಾಯಿತು. ಅರ್ಹರಿಗೆ ಫಿತರ್ ಝಕಾತ್ ನೀಡಿದ ಬಳಿಕ ಹೊಸ ಬಟ್ಟೆ ಧರಿಸಿ ಮಸೀದಿಗೆ ತೆರಲಿ ಪ್ರಾರ್ಥನೆ ಸಲ್ಲಿಸಿದರು. ಕೆಲವು ಮಸೀದಿಗಳಲ್ಲಿ ಮಹಿಳೆಯರಿಗೂ ಈದ್ ನಮಾಝ್ ನಿರ್ವಹಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ನಮಾಝ್ ಬಳಿಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಉಡುಪಿ ಜಾಮೀಯ ಮಸೀದಿಯಲ್ಲಿ ಮೌಲಾನಾ ಅಬ್ದುರ್ರಶೀದ್ ನದ್ವಿ ನೇತೃತ್ವದಲ್ಲಿ ಮತ್ತು ಉಡುಪಿ ಅಂಜುಮಾನ್ ಮಸೀದಿಯಲ್ಲಿ ಮೌಲಾನ ಇನಾಯುತುಲ್ಲಾ ರಝ್ವಿ ನೇತೃತ್ವದಲ್ಲಿ ಈದ್ ನಮಾಝ್ ನಿರ್ವಹಿಸಲಾಯಿತು.
ಉಡುಪಿ ಜಿಲ್ಲಾ ಸಂಯುಕ್ತ ಜಮಾತಿನ ಕೇಂದ್ರ ಮಸೀದಿಯಾದ ಮೂಳೂರು ಜುಮಾ ಮಸೀದಿಯಲ್ಲಿ ಖತೀಬ್ ಹಾಫಿಲ್ ಮುಹಮ್ಮದ್ ಅಶ್ರಫ್ ಸಖಾಫಿ ನೇತೃತ್ವದಲ್ಲಿ ಈದ್ ವಿಶೇಷ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಿತು.
ಕುಂದಾಪುರ ಜುಮಾ ಮಸೀದಿಯಿಂದ ಬೆಳಗ್ಗೆ ಈದ್ ಮೆರವಣಿಗೆ ಹೊರಟು, ಕುಂದಾಪುರ ಈದ್ಗಾ ಮೈದಾನದಲ್ಲಿ ಧರ್ಮಗುರು ಮೌಲಾನ ಕರಾರ್ ಹುಸೇನ್ ನೇತೃತ್ವದಲ್ಲಿ ಈದ್ ವಿಶೇಷ ನಮಾಝ್ ನೆರವೇರಿಸಲಾಯಿತು.
ಗಂಗೊಳ್ಳಿಯ ಜುಮ್ಮಾ ಮಸೀದಿಯಲ್ಲಿ ಮೌಲಾನ ಮುಝಮ್ಮಿಲ್ ನದ್ವಿ, ಮೋಹಿದೀನ್ ಜುಮ್ಮಾ ಮಸೀದಿಯಲ್ಲಿ ಖತೀಬ್ ಮೌಲಾನ ಅಬ್ದುಲ್ ಕರೀಂ ನದ್ವಿ, ಶಾಹಿ ಜುಮ್ಮಾ ಮಸೀದಿಯಲ್ಲಿ ಮೌಲಾನ ಅಬ್ದುಲ್ ಮತಿನ್ ಸಿದ್ದಿಕಿ ಅವರ ನೇತೃತ್ವದಲ್ಲಿ ವಿಶೇಷ ನಮಾಝ್ ನಿರ್ವಹಿಸಲಾಯಿತು.
ಈ ಸಂದರ್ಭದಲ್ಲಿ ಧರ್ಮಗುರುಗಳು ತಮ್ಮ ಈದ್ ಸಂದೇಶದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತಗಟ್ಟೆಗೆ ತೆರಳಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಿದರು.
ಅಲ್ಲದೆ ಎಲ್ಲರೂ ಪರಸ್ಪರ ಸಹೋದರಂತೆ ಬದುಕಿ ಶಾಂತಿಯ ವಾತಾವರಣ ನಿರ್ಮಿಸುವಂತೆ ಸೌಹಾರ್ದ ಸಂದೇಶ ನೀಡಿದರು. ಹಬ್ಬದ ದಿನ ಯಾವುದೇ ಅಹಿತಕರ ಘಟನೆ ನಡೆದಂತೆ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.