ಗದಗ ನಗರ ಸಭೆ ಉಪಾಧ್ಯಕ್ಷೆಯ ಪುತ್ರ ಸೇರಿದಂತೆ ಒಂದೇ ಕುಟುಂಬದ ನಾಲ್ವರ ಹತ್ಯೆ! ತಡರಾತ್ರಿ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿ ಪರಾರಿಯಾದ ದುಷ್ಕರ್ಮಿಗಳು

ಗದಗ ನಗರ ಸಭೆ ಉಪಾಧ್ಯಕ್ಷೆಯ ಪುತ್ರ ಸೇರಿದಂತೆ ಒಂದೇ ಕುಟುಂಬದ ನಾಲ್ವರ ಹತ್ಯೆ! ತಡರಾತ್ರಿ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿ ಪರಾರಿಯಾದ ದುಷ್ಕರ್ಮಿಗಳು

ಗದಗ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗದಗ ನಗರದ ದಾಸರ ಓಣಿಯಲ್ಲಿ ತಡರಾತ್ರಿ ನಡೆದಿದೆ. 

ಗದಗ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಕಾರ್ತಿಕ್ (27), ಕೊಪ್ಪಳದ ಭಾಗ್ಯ ನಗರ ನಿವಾಸಿ, ಹೋಟೆಲ್ ಉದ್ಯಮಿ ಪರಶುರಾಮ (55), ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷಾ (16) ಕೊಲೆಯಾದವರು. ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಕಾರ್ತಿಕ್​ ಅವರ ಮದುವೆ ತಯಾರಿ ಸಂಬಂಧ ಏಪ್ರಿಲ್​ 17 ರಂದು ಸಂಬಂಧಿಕರಾದ ಪರಶುರಾಮ, ಪತ್ನಿ ಲಕ್ಷ್ಮೀ, ಪುತ್ರಿ ಆಕಾಂಕ್ಷಾ ಕೊಪ್ಪಳದಿಂದ ಗದಗ ನಗರಕ್ಕೆ ಆಗಮಿಸಿದ್ದಾರೆ.  ಗುರುವಾರ (ಏ.18) ರಂದು ರಾತ್ರಿ ಆಕಾಂಕ್ಷಾ ಹುಟ್ಟು ಹಬ್ಬವನ್ನು ಕುಟುಂಬಸ್ಥರು ಆಚರಿಸಿದ್ದಾರೆ. ಬಳಿಕ ಪರಶುರಾಮ ಕುಟುಂಬ ಮನೆಯ ಮೊದಲನೇ ಮಹಡಿಯ ಕೋಣೆಯಲ್ಲಿ ಮಲಗಿತ್ತು.

ತಡರಾತ್ರಿ ಪರಶುರಾಮ ಕುಟುಂಬ ಮಲಗಿದ್ದ ಕೋಣೆಯ ಗಾಜಿನ ಕಿಟಕಿಯನ್ನು ಒಡೆದು ಒಳ ನುಗ್ಗಿದ ದುಷ್ಕರ್ಮಿಗಳು ಮೂವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಕಿಟಿಕಿ ಒಡೆದ ಮತ್ತು ಕಿರಿಚಾಟದ ಸದ್ದು ಕೇಳಿ ಏನಾಯಿತೆಂದು ಕೆಳಗಿನ ಕೋಣೆಯಲ್ಲಿ ಮಲಗಿದ್ದ ಕಾರ್ತಿಕ್​ ಬಾಕಳೆ ನೋಡಲು ಮೇಲೆ ಹೋಗಿದ್ದಾರೆ. ಆಗ ದುಷ್ಕರ್ಮಿಗಳು ಕಾರ್ತಿಕ್​ನನ್ನೂ ಕೊಲೆ ಮಾಡಿದ್ದಾರೆ. ಬಳಿಕ ದುಷ್ಕರ್ಮಿಗಳು ಮನೆಯ ಮಾಲಿಕ ಪ್ರಕಾಶ್ ಬಾಕಳೆ ಮತ್ತು ಪತ್ನಿ, ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರು ಮಲಗಿದ್ದ ಕೋಣೆಯ ಬಾಗಲಿ ತಟ್ಟಿದ್ದಾರೆ.

ಆದರೆ ದಂಪತಿ ಬಾಗಿಲು ತೆಗೆಯದೆ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಪೊಲೀಸರಿಗೆ ಫೋನ್ ಮಾಡುತ್ತಿದ್ದಂತೆ ದುಷ್ಕರ್ಮಿಗಳು ಹಿಂಬಾಗಿಲಿನಿಂದ ಪರಾರಿಯಾಗಿದ್ದಾರೆ. ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳನ್ನು ದುಷ್ಕರ್ಮಿಗಳು ಚರಂಡಿಯಲ್ಲಿ ಬಿಸಾಕಿದ್ದಾರೆ. ಸ್ಥಳಕ್ಕೆ ಶ್ವಾನದಳ, ವಿಧಿವಿಜ್ಞಾನ ಪ್ರಯೋಗಾಲಯ ತಂಡ, ಎಸ್ಪಿ ಬಿಎಸ್ ನೇಮಗೌಡ, ಹೆಚ್ಚುವರಿ ಎಸ್ಪಿ ಎಂ.ಬಿ ಸಂಕದ, ಡಿವೈಎಸ್ಪಿ, ಸಿಪಿಐ ಭೇಟಿ ನೀಡಿದ್ದಾರೆ.

ಮಧ್ಯರಾತ್ರಿ 2 ಗಂಟೆಗೆ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಲಾಗಿದೆ. ಘಟನೆ ಸಂಬಂಧ ಗದಗ ಶಹರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಕೊಲೆ ಮಾಡಿದವರು ದರೋಡೆಕೋರರು ಅಲ್ಲ ಅಂತ ಅನಿಸುತ್ತದೆ. ದರೋಡೆಕೋರರು ಆಗಿದ್ದರೆ ಚಿನ್ನಾಭರಣ ಲೂಟಿ ಮಾಡುತ್ತಿದ್ದರು. ಮೃತದೇಹಗಳ ಮೇಲೆ ಆಭರಣಗಳು ಹಾಗೆ ಇದೆ. ಕೆಳಮಹಡಿಯಲ್ಲಿದ್ದ ತಾಯಿ ಲಕ್ಷ್ಮೀ, ಮಗಳು ಆಕಾಂಕ್ಷಾರನ್ನು ಕೊಲೆ ಮಾಡಲಾಗಿದೆ. ಮೊದಲನೇ ಮಹಡಿಯಲ್ಲಿ ಪರಶುರಾಮ, ಕಾರ್ತಿಕ್ ಕೊಲೆ ಆಗಿದೆ. ತನಿಖೆಗೆ ಎಸ್​ಪಿ ನೇಮಗೌಡ ನೇತೃತ್ವದಲ್ಲಿ ಐವರ ತಂಡ ರಚಿಸಲಾಗಿದೆ. ಶೀಘ್ರದಲ್ಲೇ ಕೊಲೆ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಬೆಳಗಾವಿ ಐಜಿಪಿ ವಿಕಾಸ್​ಕುಮಾರ್ ಹೇಳಿದರು.

ಕೊಲೆ ನಡೆದ ಪ್ರಕಾಶ್​ ಬಾಕಳೆ ಮನೆಗೆ ಸಚಿವ ಹೆಚ್.ಕೆ.ಪಾಟೀಲ್​​ ಭೇಟಿ ನೀಡಿ, ಕುಟುಂಬಕ್ಕೆ ಧೈರ್ಯ ಹೇಳಿದರು. ಈ ವೇಳೆ ಕುಟುಂಬಸ್ಥರು  ಕೊಲೆಗಾರರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು. ಆರೋಪಿಗಳನ್ನು ಕೂಡಲೆ ಬಂಧಿಸಲಾಗುವುದು ಎಂದು ಸಚಿವ ಹೆಚ್​.ಕೆ ಪಾಟೀಲ್​​ ಕುಟುಂಬಸ್ಥರಿಗೆ ವಿಶ್ವಾಸ ನೀಡಿದರು.

Ads on article

Advertise in articles 1

advertising articles 2

Advertise under the article