ಚುನಾವಣೆಯಿಂದಾಗಿ ಹಲವು ವರ್ಷಗಳ ನಂತರ ಮುಖಾಮುಖಿಯಾದ ಆತ್ಮೀಯ ಗೆಳತಿಯರು!
Friday, April 26, 2024
ಹಾಸನ: ರಾಜ್ಯದ 14 ಕ್ಷೇತ್ರಗಳಲ್ಲಿ ಶುಕ್ರವಾರ ಮೊದಲ ಹಂತದ ಮತದಾನ ನಡೆದಿದೆ. ಹಲವು ಅಪರೂಪದ ಘಟನೆಗಳಿಗೆ ಈ ಲೋಕಸಭಾ ಚುನಾವಣೆಯು ಸಾಕ್ಷಿಯಾಯಿತು.
ಹಾಸನ ಜಿಲ್ಲೆಯಲ್ಲಿ ಇಂದು ಬಹಳ ವರ್ಷಗಳ ನಂತರ ಗೆಳತಿಯರಿಬ್ಬರು ಭೇಟಿಯಾಗಿದ್ದಾರೆ. ಜಾನಮ್ಮ (94) ಹಾಗು ಫಾತಿಮಾ (93) ಹತ್ತಾರು ವರ್ಷಗಳ ನಂತರ ಮುಖಾಮುಖಿಯಾಗಿದ್ದಾರೆ. ಇವರಿಬ್ಬರು ಬಾಲ್ಯದ ಗೆಳೆಯರಾಗಿದ್ದಾರೆ. ಆದರೆ ಮದುವೆಯಾದ ಬಳಿಕ ಇವರು ಒಬ್ಬರನ್ನೊಬ್ಬರು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ.
ಇದೀಗ ಗುಳಗಳಲೆ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಲು ಬಂದಾಗ ಕ್ಲೋಸ್ ಫ್ರೆಂಡ್ಸ್ ಜೊತೆಯಾಗಿದ್ದಾರೆ. ಮುಖಾಮಖಿಯಾದ ಕೂಡಲೇ ಸಂತಸದಿಂದ ಒಬ್ಬರನ್ನೊಬ್ಬರು ತಬ್ಬಿಕೊಂಡರು. ಈ ಅಪರೂಪದ ಕ್ಷಣಕ್ಕೆ ಗುಳಗಳಲೆ ಗ್ರಾಮದ ಮತಗಟ್ಟೆ ಸಾಕ್ಷಿಯಾಯಿತು.
ಹಾಸನ ಜಿಲ್ಲೆಯಲ್ಲಿ ಸಂಜೆ 6 ಗಂಟೆಯವರೆಗೆ 72.13% ರಷ್ಟು ಮತದಾನವಾಗಿದೆ. ಹಾಸನ ಜಿಲ್ಲೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಹಾಗೂ ಕಾಂಗ್ರೆಸ್ ನಿಂದ ಶ್ರೇಯಸ್ ಪಟೇಲ್ ಅಖಾಡದಲ್ಲಿದ್ದಾರೆ.