
ಕುಮಾರಸ್ವಾಮಿಗಿಂತ ಅವರ ಪತ್ನಿಯೇ ಶ್ರೀಮಂತೆ! ಆಸ್ತಿ ಮೌಲ್ಯ ಎಷ್ಟು ಕೋಟಿ ರೂ. ಹೆಚ್ಚಳವಾಗಿದೆ ? ಸಲ್ಲಿಸಿದ ಅಫಿಡವಿಟ್ ಪ್ರಕಾರ ಆಸ್ತಿ ಎಷ್ಟು ಇದೆ ನೋಡಿ...
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ್ದು, ಅದರ ಜೊತೆಗೆ ಸಲ್ಲಿಸಿದ ಅಫಿಡವಿಟ್ ಪ್ರಕಾರ ಜೆಡಿಎಸ್ ರಾಜ್ಯಾಧ್ಯಕ್ಷರ ಒಟ್ಟು 217.21 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ.
ಕುಮಾರಸ್ವಾಮಿ ಹಾಗೂ ಅವರ ಪತ್ನಿ ಅನಿತಾ ಕುಮಾರಸ್ವಾಮಿ 217.21 ಕೋಟಿ ರೂಪಾಯಿ ಒಡೆಯರಾಗಿದ್ದು, ಒಟ್ಟು ಚರಾಸ್ತಿ– 102.23 ಕೋಟಿ ರೂ. ಹಾಗೂ ಕುಟುಂಬದ ಒಟ್ಟು ಸ್ಥಿರಾಸ್ತಿ-114.98 ಕೋಟಿ ರೂ. ಒಟ್ಟು 217.21 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಮಾಜಿ ಸಿಎಂ ಘೋಷಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ ಕಳೆದ ವರ್ಷಕ್ಕಿಂತ ಈ ಕುಮಾರಸ್ವಾಮಿ ಆಸ್ತಿ ಮೌಲ್ಯ 50.07 ಕೋಟಿ ರೂ. ಹೆಚ್ಚಳವಾಗಿದೆ.
ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ತಮ್ಮ ಪತಿ, 65 ವರ್ಷದ ಕುಮಾರಸ್ವಾಮಿಗಿಂತ ಶ್ರೀಮಂತರಾಗಿದ್ದು, ಒಟ್ಟು 154.39 ಕೋಟಿ ರೂ. ಆಸ್ತಿ ಹೊಂದಿದ್ದಾರೆ.
ಕುಮಾರಸ್ವಾಮಿ ದಂಪತಿ ಕೋಟ್ಯಾಂತರ ರೂ ಮೌಲ್ಯದ ಆಸ್ತಿಯೊಂದಿಗೆ ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ಹೊಂದಿರುವುದು ವಿಶೇಷ. ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಬಳಿ ಚಿನ್ನ ಬೆಳ್ಳಿ ಮತ್ತು ವಜ್ರಾಭರಣಗಳು ಸಹ ಇವೆ. ಮೊದಲಿಗೆ ಕುಮಾರಸ್ವಾಮಿಯವರದ್ದು ನೋಡುವುದಾದರೆ, 47 ಲಕ್ಷ ರೂ. ಮೌಲ್ಯದ 750 ಗ್ರಾಂ ಚಿನ್ನಾಭರಣ, 9.62 ಲಕ್ಷ ರೂಪಾಯಿ ಮೌಲ್ಯದ 12.5ಕೆಜಿ ಬೆಳ್ಳಿ ಮತ್ತು 2.60 ಲಕ್ಷ ರೂ. ಮೌಲ್ಯದ 4 ಕ್ಯಾರೆಟ್ ವಜ್ರ ಹೊಂದಿರುವುದಾಗಿ ತಮ್ಮ ಅಫಿಡೆವಿಟ್ನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಸಹ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಜ್ರ ಹೊಂದಿದ್ದಾರೆ. 2.41ಕೋಟಿ ರೂ. ಮೌಲ್ಯದ 3.8ಕೆಜಿ ಚಿನ್ನಾಭರಣ, 13 ಲಕ್ಷ ರೂ. ಮೌಲ್ಯದ 17 ಕೆಜಿ ಬೆಳ್ಳಿ ಮತ್ತು 33 ಲಕ್ಷ ರೂ. ಮೌಲ್ಯದ 50 ಕ್ಯಾರೆಟ್ ಡೈಮಂಡ್ ಹೊಂದಿದ್ದಾರೆ.
ಕುಮಾರಸ್ವಾಮಿ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 54.65 ಕೋಟಿ ರೂ. ಹಿಂದೂ ಅವಿಭಜಿತ ಕುಟುಂಬದ ಹೆಸರಿನಲ್ಲಿ ಅವರು ಸುಮಾರು 8.17 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಬಿಎಸ್ಸಿ ಪದವೀಧರರಾಗಿದ್ದು, ಸಮಾಜ ಸೇವಕ, ರಾಜಕಾರಣಿ ಮತ್ತು ಕೃಷಿಕ ಎಂದು ಘೋಷಿಸಿಕೊಂಡಿದ್ದಾರೆ.
ಅನಿತಾ ಅವರು ತಾವು ವ್ಯಾಪಾರ ಮತ್ತು ಬಾಡಿಗೆ ಆದಾಯ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಏಕೆಂದರೆ ಅವರು ನಿಖಿಲ್ ಮತ್ತು ಕೋ ಹೆಸರಿನಲ್ಲಿ ಪೆಟ್ರೋಲ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವ್ಯಾಪಾರದಲ್ಲಿ ತೊಡಗಿರುವ ಉದ್ಯಮಿ ಮತ್ತು ಕಸ್ತೂರಿ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನಲ್ಲಿ ನಿರ್ದೇಶಕರಾಗಿದ್ದಾರೆ.
ಕುಮಾರಸ್ವಾಮಿ ಅವರ ವಿರುದ್ಧ ಮೂರು ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ.
ಕುಮಾರಸ್ವಾಮಿ ಅವರು ಯಾವುದೇ ಕಾರು ಹೊಂದಿಲ್ಲ. ಆದರೆ 12.55 ಲಕ್ಷ ರೂ. ಮೌಲ್ಯದ ಟ್ರ್ಯಾಕ್ಟರ್ ಹೊಂದಿದ್ದಾರೆ. ಆದರೆ ಅನಿತಾ ಅವರು ನಿಖಿಲ್ ಮತ್ತು ಕಂಪನಿಯಿಂದ 11.15 ಲಕ್ಷ ಮೌಲ್ಯದ ಕಾರು ಹೊಂದಿದ್ದಾರೆ.