ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ನಾಮಪತ್ರ ಸಲ್ಲಿಕೆ
Wednesday, April 3, 2024
ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಬುಧವಾರ ನಾಮಪತ್ರ ಸಲ್ಲಿಸಿದರು.
ಉಡುಪಿ ಕಾಂಗ್ರೆಸ್ ಭವನದಲ್ಲಿ ನಡೆದ ಸಮಾವೇಶದ ಬಳಿಕ ಮುಖಂಡರ ಜೊತೆ ತೆರಳಿ ಜಿಲ್ಲಾ ಚುನಾವಣಾ ಅಧಿಕಾರಿ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ಅವರಿಗೆ ಜಯಪ್ರಕಾಶ್ ಹೆಗ್ಡೆ ನಾಮಪತ್ರ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಸಚಿವ ಕೆ.ಜೆ.ಜಾಜ್೯, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಮಾಜಿ ಸಚಿವೆ ಮೋಟಮ್ಮ, ಚಿಕ್ಕಮಗಳೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಹಾಜರಿದ್ದರು.
ಈ ವೇಳೆ ಮಾತನಾಡಿದ ಕೆ.ಜಯಪ್ರಕಾಶ್ ಹೆಗ್ಡೆ, ಲೋಕಸಭಾ ಚುನಾವಣೆಯಲ್ಲಿ ಸಂಸದನಾಗಿ ಆಯ್ಕೆಯಾದರೆ ಕರಾವಳಿ, ಮಲೆನಾಡು ಹಾಗೂ ಬಯಲು ಸೀಮೆ ಭಾಗದ ಸಮಸ್ಯೆಗಳ ಪರಿಹಾರಕ್ಕೆ ಪ್ರಥಮ ಆದ್ಯತೆ ನೀಡುವುದಾಗಿ ಹೇಳಿದರು.
ನಾಮಪತ್ರ ಸಲ್ಲಿಸಲು ತೆರಳುವ ಮುನ್ನ ಬ್ರಹ್ಮ ಗಿರಿಯ ಕಾಂಗ್ರೆಸ್ ಭವನದಲ್ಲಿ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.