ಪುಟ್ಟ ಮಗಳ ಮುಂದೆಯೇ ಗರ್ಭಿಣಿ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಪತಿ!
ಇಂದೋರ್: ಗರ್ಭಿಣಿ ಪತ್ನಿಯನ್ನೇ ಚಾಕುವಿನಿಂದ ಇರಿದು ಪತಿಯೊಬ್ಬ ಬರ್ಬರವಾಗಿ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ಚಂದನ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗಣೇಶ್ ನಗರದಲ್ಲಿ ಈ ಪ್ರಕರಣ ನಡೆದಿದೆ. ಮೃತಳನ್ನು ಶಾರದಾ (35) ಎಂದೂ ಆರೋಪಿ ಪತಿಯನ್ನು ಉಮೇಶ್ ರಾಥೋಡ್ ಎಂದು ಗುರುತಿಸಲಾಗಿದೆ. ಮಾಹಿತಿ ಪ್ರಕಾರ, ಮೃತರು 5 ತಿಂಗಳ ಗರ್ಭಿಣಿ. ಆರೋಪಿ ಪತಿ ತನ್ನ 6 ವರ್ಷದ ಅಪ್ರಾಪ್ತ ಮಗಳ ಎದುರೇ ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ.
ಘಟನೆ ವಿವರ: ಆರೋಪಿ ಪತಿ ಉಮೇಶ್ ರಾಥೋಡ್ ತನ್ನ ಪತ್ನಿ ಶಾರದಾ ಜೊತೆ ಮದುವೆಗೆಂದು ತಡರಾತ್ರಿ ಮನೆಗೆ ಬಂದಿದ್ದ. ಈ ವೇಳೆ ಹಣದ ವಿಚಾರವಾಗಿ ಪತಿ-ಪತ್ನಿಯ ನಡುವೆ ಜಗಳ ನಡೆದಿದೆ. ಇದರಿಂದ ಕೋಪಗೊಂಡ ಪತಿ, ಪತ್ನಿ ಶಾರದಾ ಹೊಟ್ಟೆಗೆ ಮನೆಯಲ್ಲಿಟ್ಟಿದ್ದ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ಆಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.
ಪೊಲೀಸರ ಪ್ರಕಾರ, ಪತ್ನಿಗೆ ಚಾಕುವಿನಿಂದ ಇರಿಯುತ್ತಿರುವಾಗ ತನ್ನ 6 ವರ್ಷದ ಮಗಳು ಅಲ್ಲಿಯೇ ಇರುವುದನ್ನು ಕೂಡ ಆತ ನೋಡಿದ್ದಾನೆ. ಆಕೆಯ ಎದುರೇ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಚಂದನ್ ನಗರ ಪೊಲೀಸರು ಮತ್ತು ವಿಧಿವಿಜ್ಞಾನ ತಂಡ ಸ್ಥಳಕ್ಕೆ ಧಾವಿಸಿದ್ದಾರೆ. ಇದಾದ ಬಳಿಕ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿ ಉಮೇಶ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.