ನೇಹಾ ಹತ್ಯೆ ಪ್ರಕರಣ; ಮಾಹಿತಿ ಕೊರತೆಯಿಂದ ಸರ್ಕಾರದ ವಿರುದ್ಧ ಹೇಳಿಕೆ; ಕ್ಷಮೆ ಕೇಳುತ್ತೇನೆ ಎಂದ ನಿರಂಜನ್‌ ಹಿರೇಮಠ್‌

ನೇಹಾ ಹತ್ಯೆ ಪ್ರಕರಣ; ಮಾಹಿತಿ ಕೊರತೆಯಿಂದ ಸರ್ಕಾರದ ವಿರುದ್ಧ ಹೇಳಿಕೆ; ಕ್ಷಮೆ ಕೇಳುತ್ತೇನೆ ಎಂದ ನಿರಂಜನ್‌ ಹಿರೇಮಠ್‌

ಹುಬ್ಬಳ್ಳಿ: ತನ್ನ ಸ್ನೇಹಿತನಿಂದ ಕೊಲೆಯಾದ ಹುಬ್ಬಳ್ಳಿಯ ನೇಹಾ ಹಿರೇಮಠ‌ ನಿವಾಸಕ್ಕೆ ಸಚಿವ ಎಚ್‌ಕೆ ಪಾಟೀಲ್‌ ಮಂಗಳವಾರ ಭೇಟಿ ನೀಡಿ ನೇಹಾ ತಂದೆ ನಿರಂಜನ ಹಿರೇಮಠ ಹಾಗೂ ತಾಯಿ ಗೀತಾ ಅವರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಪ್ರಕರಣದ ತನಿಖೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದ್ದು, ಶೀಘ್ರ ನ್ಯಾಯ ಕೊಡಿಸುವುದಾಗಿ ಸಚಿವರು ಧೈರ್ಯ ಹೇಳಿದರು. ನಂತರ ಸಿಎಂ ಸಿದ್ದರಾಮಯ್ಯ ಅವರಿಗೆ ತಮ್ಮದೇ ಫೋನ್‌ನಲ್ಲಿ ಕರೆ ಮಾಡಿ, ನಿರಂಜನ ಹಿರೇಮಠ ಅವರಿಗೆ ನೀಡಿದರು.

ನಿರಂಜನ ಹಿರೇಮಠ ಅವರ ಜೊತೆ ಫೋನ್‌ನಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ 'ವೆರಿ ಸಾರಿ' ಎಂದು ಕ್ಷಮೆ ಕೇಳಿದರು. ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಿರಂಜನ ಹಿರೇಮಠ ಅವರು, "ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಿದ್ದಕ್ಕೆ ಸಮಾಧಾನ ಇದೆ. ವಿಶೇಷ ನ್ಯಾಯಾಲಯ ಸ್ಥಾಪಿಸಿದ್ದಕ್ಕೂ ಸಮಾಧಾನ ಇದೆ. ನಿಮಗೆ ಧನ್ಯವಾದ," ಎಂದು ಹೇಳಿದರು.

ನಂತರ ಮಾತನಾಡಿದ ನಿರಂಜನ ಹಿರೇಮಠ ಅವರು, ಪ್ರಕರಣದಲ್ಲಿ ಸರ್ಕಾರ ತಕ್ಷಣ ಸ್ಪಂದಿಸಿದೆ. ಆದರೆ, ಮಾಹಿತಿ ಕೊರತೆಯಿಂದ ಸರ್ಕಾರದ ವಿರುದ್ಧ ಹೇಳಿಕೆ ಕೊಟ್ಟಿದ್ದೇವೆ. ವಿಶೇಷ ನ್ಯಾಯಾಲಯ ಸ್ಥಾಪನೆ ಬಗ್ಗೆ ಸಚಿವರು ಹೇಳಿದ್ದಾರೆ. ಸ್ಥಳೀಯ ಶಾಸಕರು, ಜಿಲ್ಲಾಧ್ಯಕ್ಷರು ಎಲ್ಲ ಮುಖಂಡರು ನಮ್ಮ ಪರ ನಿಂತಿದ್ದಾರೆ ಎಂದರು ಹೇಳಿದರು.

ವಿಶೇಷ ನ್ಯಾಯಾಲಯ ಸ್ಥಾಪನೆ ನಿರ್ಣಾಯಕ್ಕೆ ಸರ್ಕಾರಕ್ಕೆ ಧನ್ಯವಾದ ಹೇಳ್ತೇನೆ. ಕಾನೂನಿನ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಬೆನ್ನ ಹಿಂದೆ ಸರ್ಕಾರ ಕೆಲಸ ಮಾಡಿದೆ. ಸಿಎಂ ಸಾಂತ್ವನ ಹೇಳಲು ಬರುವುದಾಗಿ ಹೇಳಿದ್ದಾರೆ.

ನೇಹಾಳ ಸಾವಿಗೆ ನ್ಯಾಯ ಸಿಗಬೇಕು. ಈಗ ಸಿಐಡಿ ತನಿಖೆಗೆ ಕೊಟ್ಟಿದ್ದಾರೆ. ಅವರು ಹೇಗೆ ತನಿಖೆ ಮಾಡ್ತಾರೋ ಮೊದಲು ಮಾಡಲಿ. ಪೊಲೀಸ್ ಇಲಾಖೆ ಸರಿಯಾಗಿ ತನಿಖೆ ಮಾಡ್ತಿಲ್ಲ ಅಂತ ಆರೋಪ ಮಾಡಿದ್ದೆ. ನಿಷ್ಪಕ್ಷವಾಗಿ ತನಿಖೆ ನಡೆದಿರುವುದು ನನಗೆ ಗೊತ್ತಾಗಿದೆ. ಆದರೆ, ಮಾಹಿತಿ ಕೊರತೆಯಿಂದಷ್ಟೆ ನಾನು ಹಿಂದೆ ಮಾತನಾಡಿದ್ದೆ. ಈ ಬಗ್ಗೆ ಪೊಲೀಸ್ ಇಲಾಖೆಯ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.

ಆತಂಕದಲ್ಲಿ ನಾನು ಕೆಲ ಹೇಳಿಕೆ ನೀಡಿದೆ. ಆದರೆ, ಪೊಲೀಸರು, ಸರ್ಕಾರ ಕಾಣದ ಕೈ ರೀತಿಯಲ್ಲಿ ಕೆಲಸ ಮಾಡಿದೆ. ಕಾಂಗ್ರೆಸ್ ನಾಯಕರೆಲ್ಲರಿಗೂ ಧನ್ಯವಾದ ಹೇಳ್ತೇನೆ. ವಿದ್ಯಾರ್ಥಿನಿಯರು ನಿರ್ಭಯವಾಗಿ ಕಾಲೇಜಿಗೆ ಹೋಗುವಂತಾಗಬೇಕು ಅನ್ನೋದೇ ನನ್ನ ಆಸೆ ಎಂದು ತಿಳಿಸಿದರು.

ನ್ಯಾಯದಾನ ವಿಳಂಬ ಆಗಬಾರದೆಂದು ವಿಶೇಷ ನ್ಯಾಯಾಲಯ ಸ್ಥಾಪನೆಗೆ ತೀರ್ಮಾನ ಮಾಡಲಾಗಿದೆ. ಇವತ್ತು ಹೈಕೋರ್ಟ್‌ಗೆ ವಿಶೇಷ ನ್ಯಾಯಾಲಯ ಸ್ಥಾಪನೆ ಪತ್ರ ತಲುಪುತ್ತದೆ ಎಂದು ಕಾನೂನು ಸಚಿವ ಎಚ್‌ಕೆ ಪಾಟೀಲ್ ಮಾಹಿತಿ ನೀಡಿದರು.

ತಪ್ಪಿಗಸ್ತರಿಗೆ ಸೂಕ್ತ ಶಿಕ್ಷೆ ಆಗಬೇಕಿದೆ. ಅನಿವಾರ್ಯ ಕಾರಣದಿಂದ ಮುಖ್ಯಮಂತ್ರಿಗಳಿಗೆ ಇಲ್ಲಿ ಬರಲಾಗಿಲ್ಲ. ಆದರೆ, ನಿರಂಜನ್ ಹಿರೇಮಠ ಜೊತೆ ಮಾತನಾಡಿದ್ದಾರೆ. ಹಿರೇಮಠರಿಗೆ ಧೈರ್ಯದಿಂದ ಇರುವಂತೆ ಸಿಎಂ ಹೇಳಿದ್ದಾರೆ. ಬಹುಬೇಗ ನೇಹಾಳ ಸಾವಿಗೆ ನ್ಯಾಯ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬರ್ಬರ ಹತ್ಯೆ ಮತ್ತು ಸಮಾಜದ ಮುಖಂಡರ ಭೇಟಿ ವೇಳೆ ವಿಶೇಷ ನ್ಯಾಯಾಲಯ ಸ್ಥಾಪನೆಗೆ ಆಗ್ರಹ ವ್ಯಕ್ತವಾಗಿತ್ತು. ಹೀಗಾಗಿ ವಿಶೇಷ ನ್ಯಾಯಾಲಯ ಸ್ಥಾಪನೆಗೆ ತೀರ್ಮಾನಿಸಿದ್ದೇವೆ. ನಾವು ಸಾಂತ್ವನ ಹೇಳಲು ಬಂದಿದ್ದೇವೆ. ನಮ್ಮ ಕರ್ತವ್ಯ ನಿಭಾಯಿಸಿ ನಾವು ಅವರ ಮನೆಗೆ ಬಂದಿದ್ದೇವೆ. 'ವೈಯಕ್ತಿಕ ಘಟನೆ' ಎಂಬ ಹೇಳಿಕೆ ಕುರಿತು ಗೃಹ ಸಚಿವರು ಮತ್ತು ಸಿಎಂ ಈಗಾಗಲೇ ಸಮಜಾಯಿಷಿ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

Ads on article

Advertise in articles 1

advertising articles 2

Advertise under the article