ಒಮಾನ್‌ನಲ್ಲಿ ಭಾರೀ ಮಳೆ; 13 ಮಂದಿ ಸಾವು; ಪ್ರವಾಹಕ್ಕೆ ಕೊಚ್ಚಿ ಹೋದ ವಾಹನಗಳು
ಮಸ್ಕತ್: ಒಮಾನ್‌ನಲ್ಲಿ ಸೋಮವಾರ ಭಾರೀ ಮಳೆ ಮುಂದುವರಿದಿದ್ದು, ಹಠಾತ್ ಪ್ರವಾಹ ಸೃಷ್ಟಿಯಾಗಿದೆ. ಪರಿಣಾಮ 13 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ ನೋಡ ನೋಡುತ್ತಿದ್ದಂತೆಯೇ ವಾಹನಗಳು ಕೊಚ್ಚಿ ಹೋಗಿವೆ.
ಉತ್ತರ ಅಲ್ ಶರ್ಕಿಯಾ ಗವರ್ನರೇಟ್‌ನಲ್ಲಿ ನಾಗರಿಕ ರಕ್ಷಣಾ ಮತ್ತು ಅಂಬುಲೆನ್ಸ್ ವಿಭಾಗದ ಶೋಧ ತಂಡಗಳ ಕಾರ್ಯಾಚರಣೆಯಿಂದಾಗಿ ಓರ್ವನ ಶವವನ್ನು ಹೊರತೆಗೆಯಲಾಗಿದೆ. ಮಗು ಸೇರಿದಂತೆ ಉಳಿದ ಮೂವರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.
ಪ್ರವಾಹದಿಂದಾಗಿ ಭಾನುವಾರ ಕನಿಷ್ಟ 13 ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದರಲ್ಲಿ 9 ವಿದ್ಯಾರ್ಥಿಗಳು, ಇಬ್ಬರು ಸ್ಥಳೀಯ ನಿವಾಸಿಗಳು ಮತ್ತು ವಲಸಿಗರೊಬ್ಬರು ಸೇರಿದ್ದಾರೆ ಎಂಬುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಧಾರಾಕಾರ ಮಳೆಯಿಂದಾಗಿ ಒಮಾನ್‌ನ ಹಲವು ಭಾಗಗಳಲ್ಲಿ ಭಾರೀ ಪ್ರವಾಹ ಉಂಟಾಗಿದೆ. ಜನರು ತಮ್ಮ ಮನೆಗಳಲ್ಲಿ ಸಿಲುಕಿಕೊಂಡಿದ್ದಾರೆ. ಒಮಾನ್‌ನ ಬೀದಿಗಳಲ್ಲಿ ಪ್ರವಾಹದ ನೀರು ಹರಿಯುತ್ತಿದ್ದಂತೆ ವಾಹನಗಳು ಜಲಾವೃತಗೊಂಡಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರಾಯಲ್ ಓಮನ್ ಪೊಲೀಸ್, ರಾಯಲ್ ಆರ್ಮಿ ಆಫ್ ಒಮಾನ್, ನಾಗರಿಕ ರಕ್ಷಣಾ ಪ್ರಾಧಿಕಾರ ಮತ್ತು ಅಂಬುಲೆನ್ಸ್ ತಂಡಗಳು ಶಾಲೆಗಳಿಂದ ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದವು.
ತುರ್ತು ನಿರ್ವಹಣೆಗಾಗಿ ಒಮಾನ್‌ನ ರಾಷ್ಟ್ರೀಯ ಸಮಿತಿಯು ಮಳೆಯಿಂದ ಪ್ರಭಾವಿತವಾಗಿರುವ ಎಲ್ಲಾ ಗವರ್ನರೇಟ್‌ಗಳನ್ನು ಎಚ್ಚರಿಸಿದೆ ಎಂದು ವರದಿ ತಿಳಿಸಿದೆ. ಒಮಾನ್ ಹೊರತುಪಡಿಸಿ, ಯುಎಇ ಕೆಲವು ಪ್ರದೇಶಗಳಲ್ಲಿ ಆಲಿಕಲ್ಲು, ಮಿಂಚು ಮತ್ತು ಗುಡುಗು ಸೇರಿದಂತೆ ಭಾರೀ ಮಳೆಯಾಗುವ ಸಾಧ್ಯತೆಗಳಿರುವುದಾಗಿ ವರದಿಯಾಗಿದೆ.