ಚುನಾವಣೆಗೂ ಮುನ್ನ ಸೂರತ್ ಲೋಕಸಭಾ ಕ್ಷೇತ್ರವನ್ನು ಗೆದ್ದ ಬಿಜೆಪಿ! ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ತಿರಸ್ಕೃತ; ನಾಮಪತ್ರ ಹಿಂಪಡೆದ 7 ಮಂದಿ ಅಭ್ಯರ್ಥಿಗಳು
ಸೂರತ್: ಸೂರತ್‌ನಲ್ಲಿ ಚುನಾವಣೆಗೂ ಮುನ್ನವೇ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುವ ಮೂಲಕ ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಗುಜರಾತ್‌ನ 26 ಸ್ಥಾನಗಳ ಪೈಕಿ ಒಂದನ್ನು ಬಿಜೆಪಿ ಚುನಾವಣೆಗೂ ಮೊದಲೇ ವಶಪಡಿಸಿಕೊಂಡಿದೆ.
ಚುನಾವಣೆಗೂ ಮುನ್ನವೇ ಸೂರತ್ ಕ್ಷೇತ್ರ ಬಿಜೆಪಿ ಖಾತೆಗೆ ಬಂದಿದೆ. ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಅವಿರೋಧವಾಗಿ ಗೆಲುವು ಸಾಧಿಸಿದ್ದಾರೆ. ನಿನ್ನೆ ಸೂರತ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾಣಿ ಅವರ ಫಾರಂ ಕೂಡ ರದ್ದಾಗಿದೆ. ಅದರ ನಂತರ ಎಲ್ಲಾ ಸ್ವತಂತ್ರ ಅಭ್ಯರ್ಥಿಗಳು ಇಂದು ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗಾಗಿ ಮುಖೇಶ್ ದಲಾಲ್ ಅವಿರೋಧವಾಗಿ ಸಂಸದನಾಗಿ ಆಯ್ಕೆಯಾಗಿದ್ದಾರೆ.
ಸೂರತ್ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧದ 8 ಅಭ್ಯರ್ಥಿಗಳ ಪೈಕಿ 7 ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಹಿಂಪಡೆದಿದ್ದಾರೆ. ಹಾಗಾಗಿ ಬಿಜೆಪಿಯ ಮುಖೇಶ್ ದಲಾಲ್ ಅವರನ್ನು ಅವಿರೋಧವಾಗಿ ಘೋಷಿಸಲಾಗಿದೆ. ಬಿಜೆಪಿಯ ಮುಖೇಶ್ ದಲಾಲ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್.ಪಾಟೀಲ್ ಅಭಿನಂದನೆ ಸಲ್ಲಿಸಿದ್ದಾರೆ.
ಈ ಬಾರಿ ಗುಜರಾತ್‌ನ ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಸಮೀಕರಣ ಸಂಪೂರ್ಣವಾಗಿ ಬದಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾಣಿ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಈ ಕ್ಷೇತ್ರದ ಚುನಾವಣಾ ಇತಿಹಾಸವು ತುಂಬಾ ಆಸಕ್ತಿದಾಯಕವಾಗಿದೆ.
ಇದು ದೇಶದ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಸಂಸದರಾಗಿ ಆಯ್ಕೆಯಾದ ಕ್ಷೇತ್ರವಾಗಿದೆ. 1989ರಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದೆ. ಅಂದರೆ ಒಮ್ಮೆಯೂ ಕಾಂಗ್ರೆಸ್ ಗೆದ್ದ ಇತಿಹಾಸವೇ ಇಲ್ಲ.
ಕುಂಭಣಿ ಮತ್ತು ಪಡಸಾಲ ಅವರು ಸಲ್ಲಿಸಿದ್ದ ಮೂರು ನಾಮಪತ್ರಗಳಲ್ಲಿ ಮಾಡಿರುವ ಸಹಿಯಲ್ಲಿ ಮೇಲ್ನೋಟಕ್ಕೆ ವ್ಯತ್ಯಾಸಗಳು ಕಂಡು ಬಂದ ಹಿನ್ನೆಲೆಯಲ್ಲಿ ತಿರಸ್ಕರಿಸಲಾಗಿದೆ.