ಉಡುಪಿ: ಎ.15- 16ರಂದು 'ಇನ್ನರ್‌ಸೆನ್ಸ್' ಕಲಾ ಪ್ರದರ್ಶನ
Saturday, April 13, 2024
ಉಡುಪಿ: ವಿಶ್ವದ ಖ್ಯಾತ ಕಲಾವಿದ ಲಿಯನಾರ್ಡೋ ಡ ವಿಂಚಿ ಅವರ ಸ್ಮರಣಾರ್ಥ ಎಪ್ರಿಲ್ 15ರಂದು ನಡೆಯುವ ವಿಶ್ವಕಲಾ ದಿನಾಚರಣೆಯ ಪ್ರಯುಕ್ತ ಮಣಿಪಾಲದ ತ್ರಿವರ್ಣ ಆರ್ಟ್ ಗ್ಯಾಲರಿಯ ವತಿಯಿಂದ ಎಪ್ರಿಲ್15 ಮತ್ತು 16ರಂದು ಆರ್ಟ್ ಸ್ಕೂಲ್‌ನ ಐವರು ಕಲಾ ವಿದ್ಯಾರ್ಥಿಗಳಿಂದ 'ಇನ್ನರ್ ಸೆನ್ಸ್' ಎಂಬ ಪ್ರತಿಷ್ಠಾಪನಾ ಕಲಾ ಪ್ರದರ್ಶನ ನಡೆಯಲಿದೆ ಎಂದು ತ್ರಿವರ್ಣ ಕಲಾ ಶಾಲೆಯ ಹರೀಶ್ ಸಾಗ ತಿಳಿಸಿದರು.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಲೆ ಹಾಗೂ ಬದುಕಿನ ವಿವಿಧ ಆಯಾಮದಲ್ಲಿ ಕಲೆಯ ಅನುಬಂಧತೆಯನ್ನು ಈ ಪ್ರತಿಷ್ಠಾಪನಾ ಕಲೆ ಸಾರುತ್ತದೆ ಎಂದರು.
ಮಣಿಪಾಲ ತ್ರಿವರ್ಣ ಕಲಾಕೇಂದ್ರದ ಕಲಾ ವಿದ್ಯಾರ್ಥಿಗಳಾದ ಅನಿರುದ್ಧ ಎ.ನಾಯ್ಕ, ಅನೂಷ ಆಚಾರ್ಯ, ಪ್ರಸಾದ್ ಆರ್., ಉಜ್ವಲ್ ನಿಟ್ಟೆ, ಯಶ್ಮಿತಾ ಗಣೇಶ್ ಅವರು ಕಾಗದ, ರಟ್ಟು, ಅಂಟು, ಮಣ್ಣು, ಮರಳು, ಹಗ್ಗ, ಬುಟ್ಟಿ, ರಂಗೋಲಿ ಪುಡಿ ಇತ್ಯಾದಿ ವಸ್ತುಗಳನ್ನು ಬಳಸಿ ನೆರಳು ಬೆಳಕಿನ ಸಂಯೋಜನೆಯಡಿಯಲ್ಲಿ ಇದನ್ನು ನಿರೂಪಿಸಿದ್ದಾರೆ ಎಂದು ತಿಳಿಸಿದರು.