ಬಿಜೆಪಿಯಿಂದ ಬಂಡಾಯ ಅಭ್ಯರ್ಥಿ ಮಾಜಿ ಶಾಸಕ ರಘುಪತಿ ಭಟ್ ಉಚ್ಚಾಟನೆ
ಉಡುಪಿ: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಪಕ್ಷದಿಂದ ಮಾಜಿ ಶಾಸಕ ರಘುಪತಿ ಭಟ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.
ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಬಿಜೆಪಿ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ನೈಋತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಪಕ್ಷೇತರ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಬಿಜೆಪಿ ಸೂಚಿಸಿತ್ತು. ಜೊತೆಗೆ ಬಿಜೆಪಿ ಹಿರಿಯ ನಾಯಕರಿಂದಲೂ ಕೂಡ ಮನವರಿಸುವ ಯತ್ನ ನಡೆದಿತ್ತು. ಆದರೆ, ನಾಮಪತ್ರ ಹಿಂದೆ ತೆಗೆದುಕೊಳ್ಳದೆ ಸ್ಪರ್ಧೆಗೆ ಇಳಿದಿದ್ದರು. ಈ ಹಿನ್ನಲೆ ರಘುಪತಿ ಭಟ್ ಅವರನ್ನು ಉಚ್ಚಾಟನೆ ಮಾಡಲಾಗಿದೆ.
ವಿಧಾನ ಪರಿಷತ್ನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರ ಸೇರಿದಂತೆ 6 ಕ್ಷೇತ್ರಗಳಿಗೆ ಜೂನ್ 3ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಮಾಜಿ ಶಾಸಕ ರಘುಪತಿ ಭಟ್ ಸ್ಪರ್ಧೆಗಿಳಿದಿದ್ದರು. ಇತ್ತ ಹಾಲಿ ಶಾಸಕ ಯಶ್ಪಾಲ್ ಸುವರ್ಣ ಬೆಂಬಲಿಗರು ಹಾಗೂ ರಘುಪತಿ ಭಟ್ ಅವರ ನಡುವಣ ವಾಕ್ಸಮರ ತಾರಕಕ್ಕೇರಿತ್ತು. ‘ರಘುಪತಿ ಭಟ್ಗೆ ಎಂಎಲ್ಸಿ ಟಿಕೆಟ್ ತಪ್ಪಿಸಿದ್ದೇ ಯಶ್ಪಾಲ್ ಸುವರ್ಣ, ಜೊತೆಗೆ ನೈಋತ್ಯ ಪದವೀಧರ ಕ್ಷೇತ್ರದಿಂದ ಟಿಕೆಟ್ ನೀಡದಂತೆ ಹೈಕಮಾಂಡ್ಗೆ ಮನವಿ ಮಾಡಿದ್ದರು. ಈ ಮೂಲಕ ತನ್ನ ರಾಜಕೀಯ ಗುರುವಿಗೇ ಯಶ್ಪಾಲ್ ಖೆಡ್ಡಾ ತೋಡಿದ್ದಾರೆ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟರ್ಗಳನ್ನು ಹರಿಯಬಿಡಲಾಗಿತ್ತು. ಇದಕ್ಕೆ ಸ್ಪಷ್ಟೀಕರಣ ನೀಡುವಂತೆ ರಾಜ್ಯ ಬಿಜೆಪಿ ಶಿಸ್ತು ಸಮಿತಿಯಿಂದ ಗುರುವಾರ ರಘುಪತಿ ಭಟ್ಗೆ ನೋಟಿಸ್ ಜಾರಿ ಮಾಡಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಯಶ್ಪಾಲ್ ಸುವರ್ಣ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ರಘುಪತಿ ಭಟ್ ಬೆಂಬಲಿಗರು ಅಭಿಯಾನ ಆರಂಭಿಸಿದ್ದರು.
ಮಾಜಿ ಶಾಸಕ ರಘುಪತಿ ಭಟ್ ಅವರು ಈ ಬಾರಿಯ ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಪಕ್ಷವು ಈ ಕ್ಷೇತ್ರದಿಂದ ಶಿವಮೊಗ್ಗದ ಡಾ. ಧನಂಜಯ ಸರ್ಜಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಅಲ್ಲದೆ, ಶಿಕ್ಷಕರ ಕ್ಷೇತ್ರದ ಟಿಕೆಟ್ ಅನ್ನು ಜೆಡಿಎಸ್ ಪಕ್ಷದ ಚಿಕ್ಕಮಗಳೂರು ಅಭ್ಯರ್ಥಿಗೆ ನೀಡಿತ್ತು. ಇದು ರಘುಪತಿ ಭಟ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಇದ ಬೆನ್ನಲ್ಲೇ ಇದೀಗ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.