ಪ್ರಜ್ವಲ್ ರೇವಣ್ಣ ಪ್ರಕರಣವನ್ನು ದುರ್ಬಲಗೊಳಿಸಲು ಕುಮಾರಸ್ವಾಮಿಯಿಂದ ಯತ್ನ: ಪ್ರಕರಣದ ಗಮನ ಬೇರೆಡೆ ಸೆಳೆಯಲು ಫೋನ್ ಟ್ಯಾಪಿಂಗ್ ನಾಟಕ: ಸಿಎಂ ಸಿದ್ದರಾಮಯ್ಯ ಕಿಡಿ

ಪ್ರಜ್ವಲ್ ರೇವಣ್ಣ ಪ್ರಕರಣವನ್ನು ದುರ್ಬಲಗೊಳಿಸಲು ಕುಮಾರಸ್ವಾಮಿಯಿಂದ ಯತ್ನ: ಪ್ರಕರಣದ ಗಮನ ಬೇರೆಡೆ ಸೆಳೆಯಲು ಫೋನ್ ಟ್ಯಾಪಿಂಗ್ ನಾಟಕ: ಸಿಎಂ ಸಿದ್ದರಾಮಯ್ಯ ಕಿಡಿ

ಮೈಸೂರು: ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ತಮ್ಮ ಅಣ್ಣನ ಮಗ ಹಾಗೂ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಆರೋಪಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಅವರ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಅವರ ಆಡಿಯೋ ಇರುವುದರಿಂದ ಅವರನ್ನೇ ವಿಚಾರಣೆ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹ ಮಾಡಿರುವ ಬಗ್ಗೆ ಮೈಸೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣವನ್ನು ದುರ್ಬಲಗೊಳಿಸಲು ಕುಮಾರಸ್ವಾಮಿ ಅವರು ಡಿ.ಕೆ ಶಿವಕುಮಾರ್‌ ಹಾಗೂ ಮತ್ತೊಬ್ಬರ ಮೇಲೆ ಹೇಳುತ್ತಿದ್ದಾರೆ ಎಂದರು.

ತಮ್ಮ ಕುಟುಂಬದ ಫೋನ್ ಟ್ಯಾಪ್ ಮಾಡಲಾಗುತ್ತಿದೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದ ಗಮನ ಬೇರೆಡೆ ಸೆಳೆಯಲು ಕುಮಾರಸ್ವಾಮಿ ಈ ರೀತಿ ಫೋನ್ ಟ್ಯಾಪಿಂಗ್ ನಾಟಕ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಎಚ್ ಡಿ ಕುಮಾರಸ್ವಾಮಿ ಅವರ ಅಣ್ಣನ ಮಗ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ. ಅತ್ಯಾಚಾರದ ವೀಡಿಯೊ ಹರಿದಾಡಿತು ಎನ್ನುವುದಕ್ಕಿಂತ, ಅತ್ಯಾಚಾರ ಘೋರ ಅಪರಾಧ. ಅತ್ಯಾಚಾರದ ಸಂಗತಿಯನ್ನು ದುರ್ಬಲಗೊಳಿಸಲು ಡಿ.ಕೆ. ಶಿವಕುಮಾರ್ ಹಾಗೂ ಮತ್ತೊಬ್ಬರ ಮೇಲೆ ಹೇಳುತ್ತಿದ್ದಾರೆ. ಅವರು ಈ ನೆಲದ ಕಾನೂನಿಗೆ ಗೌರವ ಕೊಡಬೇಕು. ಅಣ್ಣನ ಮಗ ಅಪರಾಧಿಯಲ್ಲ. ಆರೋಪಿ ಅಷ್ಟೇ ಎಂದಿದ್ದಾರೆ. ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಂತೆ ನಾನೂ ಕೂಡ ಆರೋಪಿ ಎಂದೇ ಹೇಳಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಜ್ವಲ್ ರೇವಣ್ಣ ಅವರ ಪಾಸ್ ಪೋರ್ಟ್ ರದ್ದತಿಗೆ ಮೋದಿಯವರಿಗೆ ಪತ್ರ ಬರೆದಿದ್ದು, ಈವರೆಗೆ ಅವರಿಂದ ಪ್ರತಿಕ್ರಿಯೆ ಬಂದಿಲ್ಲ. ಎಲ್ಲರಿಗೂ ಪ್ರಧಾನಮಂತ್ರಿಗಳ ಕಚೇರಿಯಿಂದ ಕೂಡಲೇ ಉತ್ತರ ದೊರಕುತ್ತದೆ ಎಂದು ನಂಬಿರುವುದೇ ನಿಮ್ಮ ತಪ್ಪು. ನಾವು ಬರೆದಿರುವ ಅನೇಕ ಪತ್ರಗಳಿಗೆ ಅವರು ಉತ್ತರ ಕೊಟ್ಟಿಲ್ಲ.

ಚುನಾಯಿತ ಸರ್ಕಾರದ ಮುಖ್ಯಮಂತ್ರಿ ಪ್ರಧಾನಿಗಳಿಗೆ ಪತ್ರ ಬರೆದಾಗ ಸ್ವಾಭಾವಿಕವಾಗಿ ಉತ್ತರ ಕೊಡುತ್ತಾರೆ ಎಂಬ ನಂಬಿಕೆ ಇದೆ. ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ಮಾಡಲು ಬರೆದ ಮೊದಲ ಪತ್ರಕ್ಕೆ ಉತ್ತರ ಕೊಟ್ಟಿಲ್ಲ. ಎರಡನೇ ಪತ್ರಕ್ಕೆ ಉತ್ತರ ಕೊಡುತ್ತಾರೋ ಇಲ್ಲವೋ ಕಾದು ನೋಡಬೇಕು ಎಂದಿದ್ದಾರೆ.

ದೇವೇಗೌಡರು ಪ್ರಜ್ವಲ ರೇವಣ್ಣ ಅವರನ್ನು ಕುಟುಂಬದಿಂದ ಹೊರಹಾಕುತ್ತೇವೆ ಎಂದಿರುವ ಬಗ್ಗೆ ಮಾತನಾಡಿದ ಸಿಎಂ, ಇವರಿಗೆ ಗೊತ್ತಿಲ್ಲದೆ ಪ್ರಜ್ವಲ ರೇವಣ್ಣ ದೇಶ ಬಿಟ್ಟು ಹೊರಟು ಹೋಗಿದ್ದಾರಾ? ಎಂದು ಪ್ರಶ್ನಿಸಿದರು.

Ads on article

Advertise in articles 1

advertising articles 2

Advertise under the article