ದೆಹಲಿಯ ಮಕ್ಕಳ ಆಸ್ಪತ್ರೆಯಲ್ಲಿ ಭಾರಿ ಬೆಂಕಿ;  7 ನವಜಾತ ಶಿಶುಗಳು ಸಾವು

ದೆಹಲಿಯ ಮಕ್ಕಳ ಆಸ್ಪತ್ರೆಯಲ್ಲಿ ಭಾರಿ ಬೆಂಕಿ; 7 ನವಜಾತ ಶಿಶುಗಳು ಸಾವು

ನವದೆಹಲಿ: ಪೂರ್ವ ದೆಹಲಿಯ ವಿವೇಕ್ ವಿಹಾರ್ ಪ್ರದೇಶದ ಮಕ್ಕಳ ಆಸ್ಪತ್ರೆಯಲ್ಲಿ ಕಳೆದ ತಡರಾತ್ರಿ ಭಾರಿ ಬೆಂಕಿ ಕಾಣಿಸಿಕೊಂಡು ಹತ್ತಿ ಉರಿದು ಕನಿಷ್ಠ 7 ನವಜಾತ ಶಿಶುಗಳು ಮೃತಪಟ್ಟಿವೆ. ನಿನ್ನೆ ರಾತ್ರಿ 11:30 ರ ಸುಮಾರಿಗೆ 'ಬೇಬಿ ಕೇರ್ ನ್ಯೂ ಬಾರ್ನ್ ಆಸ್ಪತ್ರೆ' ಮತ್ತು ಅದರ ಪಕ್ಕದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಶಹದಾರದ ಕೃಷ್ಣ ನಗರದಲ್ಲಿನ ಬಹುಮಹಡಿ ವಸತಿ ಕಟ್ಟಡದಲ್ಲಿ ಮತ್ತೊಂದು ಬೆಂಕಿ ಕಾಣಿಸಿಕೊಂಡಿದ್ದು, ಮೂವರು ಮೃತಪಟ್ಟಿದ್ದಾರೆ. ಅಧಿಕಾರಿಗಳ ಪ್ರಕಾರ, ಒಟ್ಟು 12 ಶಿಶುಗಳನ್ನು ರಕ್ಷಿಸಲಾಗಿದೆ, ಅವರಲ್ಲಿ 7 ಶಿಶುಗಳು ಮೃತಪಟ್ಟಿದ್ದು, ಐವರನ್ನು ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ. ರಕ್ಷಿಸಲ್ಪಟ್ಟ ನವಜಾತ ಶಿಶುಗಳನ್ನು ಪೂರ್ವ ದೆಹಲಿಯ ಅಡ್ವಾನ್ಸ್ ಎನ್ಐಸಿಯು ಆಸ್ಪತ್ರೆಗೆ ಕರೆದೊಯ್ಯಲಾಯಿತು. ದೆಹಲಿ ಅಗ್ನಿಶಾಮಕ ಸೇವೆಗಳ ನಿರ್ದೇಶಕ ಅತುಲ್ ಗಾರ್ಗ್ ಅವರು ರಾತ್ರಿ 11.32 ಕ್ಕೆ ಬೇಬಿ ಕೇರ್ ಆಸ್ಪತ್ರೆಯಲ್ಲಿ ಬೆಂಕಿಯ ಬಗ್ಗೆ ಕರೆ ಸ್ವೀಕರಿಸಿದರು, ನಂತರ ಒಂಬತ್ತು ಅಗ್ನಿಶಾಮಕ ಟೆಂಡರ್‌ಗಳನ್ನು ತಕ್ಷಣವೇ ಸೇವೆಗೆ ನಿಗದಿಪಡಿಸಲಾಯಿತು.

"ವಿವೇಕ್ ವಿಹಾರ್ ಪ್ರದೇಶದ ಐಟಿಐ, ಬ್ಲಾಕ್ ಬಿ ಬಳಿ ಇರುವ ಬೇಬಿ ಕೇರ್ ಸೆಂಟರ್‌ನಿಂದ ಅಗ್ನಿಶಾಮಕ ಕರೆ ಸ್ವೀಕರಿಸಲಾಗಿದೆ. ಒಟ್ಟು ಒಂಬತ್ತು ಅಗ್ನಿಶಾಮಕ ಟೆಂಡರ್‌ಗಳನ್ನು ರವಾನಿಸಲಾಗಿದೆ" ಎಂದು ಗಾರ್ಗ್ ಹೇಳಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಕ್ಕಳ ಆಸ್ಪತ್ರೆಯಲ್ಲಿ ಬೆಂಕಿ ಹತ್ತಿ ಉರಿದ ಘಟನೆ ಹೃದಯ ವಿದ್ರಾವಕವಾಗಿದೆ. ನಿರ್ಲಕ್ಷ್ಯಕ್ಕೆ ಕಾರಣರಾದವರನ್ನು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಬೆಂಕಿ ದುರ್ಘಟನೆಯಲ್ಲಿ ಮಕ್ಕಳನ್ನು ಕಳೆದುಕೊಂಡವರ ಜೊತೆ ಸರ್ಕಾರ ನಿಂತಿದೆ. ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆಯನ್ನು ನೀಡಲಾಗುವುದು. ಬೆಂಕಿಯ ಹಿಂದಿನ ಕಾರಣಗಳನ್ನು ತನಿಖೆ ಮಾಡಲಾಗುತ್ತಿದ್ದು, ನಿರ್ಲಕ್ಷ್ಯ ತೋರಿದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.

ನಿರ್ಲಕ್ಷ್ಯ ತೋರಿದವರಿಗೆ ಅಥವಾ ಯಾವುದೇ ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಹೇಳಿದ್ದಾರೆ.

ಗುಜರಾತ್‌ನ ರಾಜ್‌ಕೋಟ್ ನಗರದಲ್ಲಿ ಕಿಕ್ಕಿರಿದ ಆಟದ ವಲಯದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಕಟ್ಟಡ ಕುಸಿದು ಕನಿಷ್ಠ 27 ಜನರು ಮೃತಪಟ್ಟ ದಿನವೇ ಈ ದುರ್ಘಟನೆ ನಡೆದಿದೆ.

ದೆಹಲಿಯ ಮಕ್ಕಳ ಆಸ್ಪತ್ರೆಯೊಂದರಲ್ಲಿ ಸಂಭವಿಸಿದ ಅಗ್ನಿ ದುರಂತ ಹೃದಯ ವಿದ್ರಾವಕವಾಗಿದೆ. ಪುಟ್ಟ ಕಂದಮ್ಮಗಳನ್ನು ಕಳೆದುಕೊಂಡ ಕುಟುಂಬಸ್ಥರಿಗೆ ನನ್ನ ಸಂತಾಪಗಳು. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article