ಮೈಸೂರಿಗೆ ಬಂದಿದ್ದ ಪ್ರಧಾನಿ ಮೋದಿಯ 80 ಲಕ್ಷ ರೂ. ಹೊಟೆಲ್ ಬಿಲ್ ಬಾಕಿ! ರಾಜ್ಯ ಸರ್ಕಾರ ಭರಿಸಲಿದೆ ಎಂದ ಅರಣ್ಯ ಸಚಿವ ಈಶ್ವರ್ ಖಂಡ್ರೆ
ಬೆಂಗಳೂರು: ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(ಎನ್ಟಿಸಿಎ) ಕಳೆದ ವರ್ಷ ಏಪ್ರಿಲ್ನಲ್ಲಿ ಆಯೋಜಿಸಿದ್ದ ಹುಲಿ ಯೋಜನೆ - 50 ಕಾರ್ಯಕ್ರಮದಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಆತಿಥ್ಯದ ವೆಚ್ಚ 80 ಲಕ್ಷ ರೂಗಳನ್ನು ಕರ್ನಾಟಕ ಸರ್ಕಾರ ಭರಿಸಲಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಈ ಬಗ್ಗೆ ಸಚಿವರ ಕಚೇರಿ ಹೇಳಿಕೆ ಬಿಡುಗಡೆ ಮಾಡಿದ್ದು, ಪ್ರಧಾನಿ, ರಾಷ್ಟ್ರಪತಿಗಳಂತಹ ಗಣ್ಯರು ರಾಜ್ಯಕ್ಕೆ ಭೇಟಿ ನೀಡಿದಾಗ ಅವರಿಗೆ ಆತಿಥ್ಯ ವಹಿಸುವುದು ರಾಜ್ಯ ಸರ್ಕಾರದ ಸಂಪ್ರದಾಯವಾಗಿದೆ.
ಆದರೆ ಕಳೆದ ವರ್ಷ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಕಾರ್ಯಕ್ರಮದ ಯೋಜನೆಯಲ್ಲಿ ರಾಜ್ಯ ಸರ್ಕಾರ ತೊಡಗಿಸಿಕೊಂಡಿರಲಿಲ್ಲ (ಪ್ರಾಜೆಕ್ಟ್ ಟೈಗರ್) ಎಂದು ಸಚಿವರು ತಿಳಿಸಿದ್ದಾರೆ.
ಪ್ರಧಾನಿ ಭೇಟಿ ನೀಡಿದ್ದಾಗ ನೀತಿ ಸಂಹಿತೆ ಜಾರಿಯಲ್ಲಿತ್ತು. ಆದ್ದರಿಂದ ಅದು ಸಂಪೂರ್ಣ ಕೇಂದ್ರ ಸರ್ಕಾರದ ಯೋಜನೆಯಾಗಿತ್ತು. ಆರಂಭದಲ್ಲಿ ಈ ಯೋಜನೆಗೆ 3 ಕೋಟಿ ರೂಪಾಯಿ ಖರ್ಚು ಮಾಡಲು ಯೋಜನೆ ಮಾಡಲಾಗಿತ್ತು. ಆದರೆ ವೆಚ್ಚ 6.33 ಕೋಟಿ ರೂಪಾಯಿಗಳಾಗಿತ್ತು. ಬಾಕಿ ಉಳಿದ 3.3 ಕೋಟಿ ರೂಪಾಯಿಗಳು ಎನ್ಟಿಸಿಯಿಂದ ಬರಬೇಕು ಎಂದು ಸಚಿವರು ಹೇಳಿದ್ದಾರೆ.
ರಾಜ್ಯ ಸರ್ಕಾರದ ಅರಣ್ಯ ಇಲಾಖೆ ಪ್ರಧಾನಿಯವರ ಹೊಟೆಲ್ ಬಿಲ್ (80 ಲಕ್ಷ ರೂಪಾಯಿ)ಗಳನ್ನು ಭರಿಸಲು ನಿರ್ಧರಿಸಿದೆ ಎಂದು ಸಚಿವರ ಕಚೇರಿ ಪ್ರಕಟಣೆ ತಿಳಿಸಿದೆ.