ಪೊಲೀಸರಿಗೆ ಬೆದರಿಕೆಯೊಡ್ಡಿದ ಪ್ರಕರಣ; ಶಾಸಕ ಹರೀಶ್ ಪೂಂಜಾರ ಮನೆಯ ಮುಂದೆ ಜಮಾಯಿಸಿದ ಪೊಲೀಸರು; ವಿಚಾರಣೆಗೆ ಹಾಜರಾಗುವಂತೆ ನೋಟಿಸ್!
ಬೆಳ್ತಂಗಡಿ: ಪೊಲೀಸರಿಗೆ ಬೆದರಿಕೆ ಹಾಕಿರುವ ಆರೋಪಕ್ಕೆ ಸಂಬಂಧಿಸಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಬುಧವಾರ ಬೆಳ್ತಂಗಡಿಯ ಗರ್ಡಾಡಿಯಲ್ಲಿರುವ ಹರೀಶ್ ಪೂಂಜ ನಿವಾಸಕ್ಕೆ ಪೊಲೀಸ್ ತಂಡ ಆಗಮಿಸಿದ್ದು, ಶಾಸಕರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆನ್ನಲಾಗಿದೆ.
'ಬೆಳ್ತಂಗಡಿ ಪೊಲೀಸ್ ಠಾಣಾ ಅ. ಕ 58/2024 ಕಲಂ: 143,147,341,504,506 ಜೊತೆಗೆ 149 ಐಪಿಸಿ ಪ್ರಕರಣದಲ್ಲಿ ಈ ಕೆಳಗೆ ಹೆಸರು ವಿಳಾಸ ನಮೂದಿಸಿದ ನೀವು ಆರೋಪಿದಾರರಾಗಿರುತ್ತೀರಿ. ಬೆಳ್ತಂಗಡಿ ಪೊಲೀಸು ಠಾಣಾ ಪೊಲೀಸು ನಿರೀಕ್ಷಕ ಹಾಗೂ ತನಿಖಾಧಿಕಾರಿಯಾದ ಬಿ. ಜಿ. ಸುಬ್ಬಾಪೂರ ಮರ್ ಆದ ನಾನು ಸದರಿ ಪ್ರಕರಣದಲ್ಲಿ ನಿಮ್ಮನ್ನು ವಿಚಾರಣೆಗೆ ಒಳಪಡಿಸಲು ಸಾಕಷ್ಟು ಸಾಕ್ಷ್ಯಾಧಾರ ಹಾಗೂ ಸನ್ನಿವೇಷಗಳು ಕಂಡು ಬಂದಿದ್ದು, ಈ ನೋಟೀಸು ಸ್ವೀಕರಿಸಿದ ಕೂಡಲೇ ಯಾವುದೇ ವಿಳಂಬವಿಲ್ಲದೇ ಪೊಲೀಸ್ ಬರಲು ಹಾಗೂ ಸಹಕರಿಸಲು ತಿಳಿಯಪಡಿಸಲಾಗಿದೆ' ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆನ್ನಲಾಗಿದೆ.
ಮೇ.18 ರಂದು ಅಕ್ರಮ ಕಲ್ಲು ಗಣಿಗಾರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಬಿಜೆಪಿ ಯುವ ಮೋರ್ಚಾ ಮಂಡಲ ಘಟಕದ ಅಧ್ಯಕ್ಷರನ್ನು ಬಂಧಿಸಿದ್ದರು. ಇದನ್ನು ಖಂಡಿಸಿ ಶಾಸಕ ಹರೀಶ್ ಪೂಂಜ ಕಾರ್ಯಕರ್ತರೊಂದಿಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮಧ್ಯರಾತ್ರಿ ಪ್ರತಿಭಟಿಸಿ ಪೊಲೀಸರನ್ನು ನಿಂದಿಸಿದ್ದರು. ಈ ವಿಚಾರವಾಗಿ ಪೊಲೀಸರು ಶಾಸಕರ ಮೇಲೂ ಪ್ರಕರಣ ದಾಖಲಿಸಿಕೊಂಡಿದ್ದರು.
ಬಿಜೆಪಿ ಮುಖಂಡನ ಬಂಧನ ಹಾಗೂ ತನ್ನ ಮೇಲೆ ಪ್ರಕರಣ ದಾಖಲಾಗಿದ್ದನ್ನು ವಿರೋಧಿಸಿ ಮೇ.20 ರಂದು ತಾಲ್ಲೂಕು ಆಡಳಿತ ಕಚೇರಿಯು ಮುಂದೆ ಪ್ರತಿಭಟನೆ ನಡೆಸಿದ್ದರು. ಶಾಸಕರು ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದ್ದಾರೆ, ಪೊಲೀಸ್ ಅಧಿಕಾರಿಗಳನ್ನು ನಿಂದಿಸಿದ್ದಾರೆ ಎಂದು ಎರಡನೇ ಪ್ರಕರಣ ದಾಖಲಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹರೀಶ್ ಪೂಂಜ ಅವರು ವಿಚಾರಣೆಗೆ ಪೊಲೀಸ್ ಠಾಣೆಗೆ ಹಾಜರಾಗಿ ಸಹಕರಿಸುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಈ ಹಿನ್ನೆಲೆ ಅವರ ಮನೆಗೆ ಸಾರ್ವಜನಿಕ ಭೇಟಿಗೆ ಪೊಲೀಸರು ನಿರಾಕರಿಸಿದ್ದು, ಮನೆಗೆ ಹೋಗುವ ರಸ್ತೆಗೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ವಿಚಾರ ತಿಳಿದು ಅವರ ಮನೆ ಮುಂದೆ ಕಾರ್ಯಕರ್ತರು ಜಮಾಯಿಸಲಾರಂಬಿಸಿದ್ದಾರೆ.