ಭಾರಿ ಮಳೆಗೆ ಮಂಗಳೂರಿನಲ್ಲಿ ಕೊಚ್ಚಿ ಹೋದ ರಿಕ್ಷಾ; ಚಾಲಕ ಸಾವು; ಹಲವು ಮನೆಗಳು ಜಲಾವೃತ

ಭಾರಿ ಮಳೆಗೆ ಮಂಗಳೂರಿನಲ್ಲಿ ಕೊಚ್ಚಿ ಹೋದ ರಿಕ್ಷಾ; ಚಾಲಕ ಸಾವು; ಹಲವು ಮನೆಗಳು ಜಲಾವೃತ

ಮಂಗಳೂರು: ಮಂಗಳೂರು ಹಾಗು ಉಡುಪಿಯಲ್ಲಿ ಶುಕ್ರವಾರದಿಂದ ಭಾರಿ ಮಳೆ ಬೀಳುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಮಂಗಳೂರು ಕೊಟ್ಟಾರ ಚೌಕಿಯಲ್ಲಿ ತಗ್ಗು ಪ್ರದೇಶದ 20ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ.‌ ಮಳೆ ನೀರು ಹರಿಯುವ ಕಾಲುವೆಯಲ್ಲಿ ರಿಕ್ಷಾವೊಂದು ಕೊಚ್ಚಿ ಹೋಗಿದ್ದು, ಚಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮೃತರನ್ನು ಕೊಟ್ಟಾರ ನಿವಾಸಿ ದೀಪಕ್ ಆಚಾರ್ಯ (44) ಎಂದು ಗುರುತಿಸಲಾಗಿದೆ. ಅವರ ಮೃತ ದೇಹವು ಕಾಲುವೆಯಲ್ಲಿ ಪತ್ತೆಯಾಗಿದೆ. ಕೊಟ್ಟಾರ ಪ್ರದೇಶದಲ್ಲಿ ಮಳೆ ನೀರಿನಿಂದಾಗಿ ಕಾಲುವೆ ಉಕ್ಕಿ ಹರಿದಿತ್ತು. ನೀರು ರಸ್ತೆಯ ಮೇಲೂ ಹರಿಯುತ್ತಿದ್ದ ವೇಳೆ ದೀಪಕ್ ಅವರ ರಿಕ್ಷಾ ಕಾಲುವೆಗೆ ಉರುಳಿತ್ತು ಎಂದು ಸ್ಥಳೀಯ ಪಾಲಿಕೆ‌ ಸದಸ್ಯ ಮನೋಜ್ ಕುಮಾರ್ ತಿಳಿಸಿದ್ದಾರೆ.

ಭಾರಿ ಮಳೆಯಿಂದಾಗಿ ಕೊಟ್ಟಾರ ಚೌಕಿಯಲ್ಲಿ ಸುಮಾರು 10 ಮನೆಗಳು ಹಾಗೂ ಸಾಗರ್ ಕೋರ್ಟ್ ಪ್ರದೇಶದಲ್ಲಿ ಸುಮಾರು 10 ಮನೆಗಳು ಜಲಾವೃತವಾಗಿವೆ. ಸಾಗರ ಕೋರ್ಟ್ ಪ್ರದೇಶದಲ್ಲಿ ಜಲಾವೃತವಾಗಿದ್ದ ಮನೆಯೊಂದರಿಂದ ವೃದ್ಧೆಯೊಬ್ಬರನ್ನು ರಕ್ಷಣೆ ಮಾಡಲಾಗಿದೆ. ಅನಾರೋಗ್ಯ ಪೀಡಿತ ಲಕ್ಷ್ಮೀ (85) ಎಂಬುವವರು ಜಲಾವೃತಗೊಂಡಿದ್ದ ಮನೆಯಲ್ಲಿ ಸಿಲುಕಿದ್ದರು. ಅವರ ಕುಟುಂಬ ಈಚೆಗಷ್ಟೇ ಬೆಂಗಳೂರಿನಿಂದ ಬಂದು ಇಲ್ಲಿ ನೆಲೆಸಿತ್ತು. ಬಳಿಕ ಪಕ್ಕದ ಮನೆಯ ಯತೀಶ್ ಎಂಬುವರು ಅಗ್ನಿಶಾಮಕ ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ರಾತ್ರಿಯೇ ಸ್ಥಳಕ್ಕೆ ಧಾವಿಸಿ ವೃದ್ಧೆಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದರು ಎಂದು ಸ್ಥಳೀಯರು ಮಾಹಿತಿ ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದೆ. ಶನಿವಾರ ಬೆಳಿಗ್ಗೆ 8.30ರವರೆಗೆ 24 ಗಂಟೆಗಳಲ್ಲಿ ಮೂಲ್ಕಿ ತಾಲ್ಲೂಕಿನ ಪಡುಪಣಂಬೂರಿನಲ್ಲಿ 19.20 ಸೆಂ.ಮೀ., ಕಿಲ್ಪಾಡಿಯಲ್ಲಿ 13.35, ಕೆಮ್ರಾಲ್‌ನಲ್ಲಿ 8.95, ಮಂಗಳೂರು ತಾಲ್ಲೂಕಿನ ಚೇಳಾಯ್ರುವಿನಲ್ಲಿ 13.30, ಬಾಳದಲ್ಲಿ 12.75, ಶಿರ್ತಾಡಿಯಲ್ಲಿ 10.45, ಪಡುಮಾರ್ನಾಡುವಿನಲ್ಲಿ 10.20, ಬೆಳುವಾಯಿಯಲ್ಲಿ 9.75, ಬಂಟ್ವಾಳ ತಾಲ್ಲೂಕಿನ ಬಡಗ ಬೆಳ್ಳೂರಿನಲ್ಲಿ 8.85 ಹಾಗೂ ಬೆಳ್ತಂಗಡಿ ತಾಲ್ಲೂಕಿನ ಹೊಸಂಗಡಿಯಲ್ಲಿ 8.65 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ‌ಯ ಮೂಲಗಳು ತಿಳಿಸಿವೆ

Ads on article

Advertise in articles 1

advertising articles 2

Advertise under the article