ಸಲ್ಮಾನ್ ಖಾನ್ ನಿವಾಸದ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣ: ಆರೋಪಿ ಪೊಲೀಸ್​ ಕಸ್ಟಡಿಯಲ್ಲಿದ್ದಾಗಲೇ ಆತ್ಮಹತ್ಯೆ!

ಸಲ್ಮಾನ್ ಖಾನ್ ನಿವಾಸದ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣ: ಆರೋಪಿ ಪೊಲೀಸ್​ ಕಸ್ಟಡಿಯಲ್ಲಿದ್ದಾಗಲೇ ಆತ್ಮಹತ್ಯೆ!

ಮುಂಬಯಿ: ಇತ್ತೀಚೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆಯ ಹೊರಗೆ ಗುಂಡು ಹಾರಿಸಿದ್ದ ಪ್ರಕರಣದ ಆರೋಪಿ ಪೊಲೀಸ್​ ಕಸ್ಟಡಿಯಲ್ಲಿದ್ದಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶೂಟರ್‌ಗಳಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿದ ಒಬ್ಬ ಆರೋಪಿಯು ಮುಂಬೈ ಪೊಲೀಸ್ ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಆರೋಪಿಯನ್ನು ಅನುಜ್ ಥಾಪನ್ (32) ಎಂದು ಗುರುತಿಸಲಾಗಿದೆ. ಅನುಜ್​ ಆತ್ಮಹತ್ಯೆಗೆ ಯತ್ನಿಸಿದ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.

ಮೃತ ಅನುಜ್ ಥಾಪನ್​ನನ್ನು ಏಪ್ರಿಲ್ 26 ರಂದು ಪಂಜಾಬ್​ನಲ್ಲಿ ಬಂಧಿಸಲಾಗಿತ್ತು. ಏಪ್ರಿಲ್ 14 ರಂದು ಸಲ್ಮಾನ್​ ಖಾನ್​ ಮುಂಬೈ ಮನೆಯ ಹೊರಗೆ ಫೈರಿಂಗ್ ಮಾಡಲು ಬಳಸಲಾದ ಶಸ್ತ್ರಾಸ್ತ್ರಗಳನ್ನು ಅನುಜ್ ಥಾಪನ್ ಒದಗಿಸಿದ ಆರೋಪವಿದೆ. ಇನ್ನೊಬ್ಬ ಆರೋಪಿ ಸೋನು ಸುಭಾಷ್ ಚಂದರ್ ಕೂಡ ಶಸ್ತ್ರಾಸ್ತ್ರಗಳನ್ನು ಒದಗಿಸಿದ ಆರೋಪದಲ್ಲಿ ಬಂಧನದಲ್ಲಿದ್ದಾನೆ.

ನಟ ಸಲ್ಮಾನ್ ಖಾನ್ ಅವರ ಬಾಂದ್ರಾ ನಿವಾಸದ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಬಂಧಿಸಲಾದ ಮೂವರು ಆರೋಪಿಗಳನ್ನು ಮೇ 8ರವರೆಗೆ ವಿಶೇಷ ನ್ಯಾಯಾಲಯವು ಸೋಮವಾರವಷ್ಟೇ ಪೋಲೀಸ್ ಕಸ್ಟಡಿಗೆ ನೀಡಿತ್ತು. ಅದಾಗಿ ಎರಡು ದಿನಗಳಲ್ಲಿ ಈ ಘಟನೆ ನಡೆದಿದೆ.

ಏ.29ರ ವಿಚಾರಣೆಯಲ್ಲಿ ವಿಶೇಷ ಎಂಸಿಒಸಿಎ ನ್ಯಾಯಾಧೀಶ ಎ ಎಂ ಪಾಟೀಲ್ ಅವರು ವಿಕ್ಕಿ ಗುಪ್ತಾ (24), ಸಾಗರ್ ಪಾಲ್ (21), ಮತ್ತು ಅನುಜ್ ಥಾಪನ್ (32) ಅವರನ್ನು ಪೊಲೀಸ್ ಕಸ್ಟಡಿಗೆ ಮತ್ತು ಸೋನು ಚಂದರ್ ಬಿಷ್ಣೋಯ್ (37) ಅವರನ್ನು ವೈದ್ಯಕೀಯ ಕಾರಣಗಳಿಗಾಗಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

ಬೈಕ್ ನಲ್ಲಿ ಬಂದ ಇಬ್ಬರು ಶೂಟರ್ ಗಳು ನಟ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಅವರ ಬಾಲ್ಕನಿಯನ್ನು ಗುರಿಯಾಗಿಸಿಕೊಂಡು ಹಲವು ಸುತ್ತಿನ ಗುಂಡುಗಳನ್ನು ಹಾರಿಸಿದ್ದರು. ಬಾಂದ್ರಾದಲ್ಲಿರುವ ನಟನ ನಿವಾಸದ ಹೊರಗೆ ಗುಂಡು ಹಾರಿಸಿದ ಶೂಟರ್‌ಗಳಾದ ವಿಕ್ಕಿ ಗುಪ್ತಾ ಮತ್ತು ಸಾಗರ್ ಪಾಲ್ ಅವರನ್ನು ಗುಜರಾತ್‌ನ ಭುಜ್‌ನಿಂದ ಬಂಧಿಸಲಾಗಿದೆ. ಮುಂಬೈ ಪೊಲೀಸರು ಎಲ್ಲಾ ಬಂಧಿತ ಆರೋಪಿಗಳ ವಿರುದ್ಧ MCOCA ಸೆಕ್ಷನ್‌ಗಳನ್ನು ಅನ್ವಯಿಸಿದ್ದಾರೆ.

Ads on article

Advertise in articles 1

advertising articles 2

Advertise under the article