ಸೋತದ್ದಕ್ಕೆ ಗೇಲಿ ಮಾಡಿದ್ದ ಕರುಣಾನಿಧಿ ಪುತ್ರಿ ಕನ್ನಿಮೋಳಿಗೆ ಅಣ್ಣಾಮಲೈ ಕೊಟ್ಟ ತಿರುಗೇಟು ಏನು...?
ಚೆನ್ನೈ: 2024ರ ಲೋಕಸಭೆ ಚುನಾವಣೆಯಲ್ಲಿ ಸಾಕಷ್ಟು ನಿರೀಕ್ಷೆಗಳೊಂದಿಗೆ ತಮಿಳುನಾಡಿನಲ್ಲಿ ಸ್ಫರ್ಧಿಸಿದ್ದ ಅಣ್ಣಾಮಲೈ ನೇತೃತ್ವದ ಬಿಜೆಪಿಗೆ ತೀವ್ರ ನಿರಾಸೆಯಾಗಿದ್ದು ಸಮೀಕ್ಷೆಗಳ ಪ್ರಕಾರ 1ರಿಂದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬಹುದು ಎಂದು ಹೇಳಲಾಗಿತ್ತು.
ಆದರೆ ಸಮೀಕ್ಷೆಗಳು ಹುಸಿಯಾಗಿದ್ದು ಕಾಂಗ್ರೆಸ್ ನೇತೃತ್ವದ INDIA ಮೈತ್ರಿಕೂಟ ಎಲ್ಲಾ ಕ್ಷೇತ್ರಗಳಲ್ಲಿ ಗೆದ್ದು ಬೀಗಿದೆ. ಇನ್ನು ಕೊಯಂಬತ್ತೂರಿನಿಂದ ಸ್ಪರ್ಧಿಸಿದ ಅಣ್ಣಾಮಲೈ 1.18 ಲಕ್ಷ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಇದೇ ವಿಷಯವಾಗಿ ಡಿಎಂಕೆ ನಾಯಕಿ, ಮಾಜಿ ಸಿಎಂ ಕರುಣಾನಿಧಿ ಪುತ್ರಿ ಕನ್ನಿಮೋಳಿ, ಗೆದ್ದೆ ಗೆಲ್ಲುತ್ತೇವೆ ಎಂದು ಅತಿಯಾದ ಆತ್ಮವಿಶ್ವಾಸ ಇಟ್ಟುಕೊಂಡಿದ್ದ ಅಣ್ಣಾಮಲೈ ಸೋಲಾಗಿದೆ ಎಂದು ಗೇಲಿ ಮಾಡಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ನೀಡಿದ ಅಣ್ಣಾಮಲೈ, ನನ್ನ ತಂದೆ ಕರುಣಾನಿದಿಯಾಗಿದ್ದರೆ ನಾನು ಸುಲಭದಲ್ಲಿ ಗೆಲ್ಲುತ್ತಿದ್ದೆ. ಆದರೆ ನನ್ನ ತಂದೆ ಕುಪ್ಪುಸ್ವಾಮಿ ಹೀಗಾಗಿ ಗೆಲ್ಲೋದಕ್ಕೆ ಸ್ವಲ್ಪ ಸಮಯ ಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ, ಲೋಕಸಭೆ ಚುನಾವಣೆಯಲ್ಲಿ ನಮ್ಮ ಮತ ಪ್ರಮಾಣ ಹೆಚ್ಚಾಗಿದ್ದು ಶೇಕಡ 11ಕ್ಕೆ ಬಂದು ತಲುಪಿದ್ದೇವೆ. ಮುಂಬರುವ ವರ್ಷಗಳಲ್ಲಿ ಪಕ್ಷದ ಮತಗಳಿಕೆ ಮತ್ತಷ್ಟು ಹೆಚ್ಚಾಗಲಿದೆ. ಈ ಬಾರಿ 12 ಸ್ಥಾನಗಳಲ್ಲಿ ಬಿಜೆಪಿ ಎರಡನೇ ಸ್ಥಾನ ಗಳಿಸಿದೆ. 2014ಕ್ಕೆ ಹೋಲಿಸಿದರೆ ಬಿಜೆಪಿ ತನ್ನ ಮತಗಳನ್ನು ದ್ವಿಗುಣಗೊಳಿಸಿದೆ. ನಮ್ಮ ಕಾರ್ಯಕರ್ತರು ಗ್ರೌಂಡ್ ಲೆವೆಲ್ ನಲ್ಲಿ ಕೆಲಸ ಮಾಡಿದ್ದು ಪಕ್ಷ ಗಟ್ಟಿಯಾಗುತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪುಟಿದೇಳಲಿದೆ ಎಂದರು.