ಮೋದಿಗಿಂತಲೂ ಹೆಚ್ಚು ಮತ ಪಡೆದ ರಾಹುಲ್ ಗಾಂಧಿ! ಗೆಲುವಿನ ಅಂತರವು ಮೋದಿಗಿಂತಲೂ ದುಪ್ಪಟ್ಟು...!
ಬೆಂಗಳೂರು: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹಲವು ಲೆಕ್ಕಾಚಾರಗಳು ತಲೆಕೆಳಗಾಗಿದೆ. ಬಿಜೆಪಿ ಹೇಳಿದಷ್ಟು ಸೀಟುಗಳು ಬಂದಿಲ್ಲ. ಸರಕಾರ ರಚಿಸಬೇಕಿದ್ದರೂ ಬಿಜೆಪಿ ಈ ಹಿಂದಿನಂತೆ ಎಲ್ಲವನ್ನು ಸ್ವತಃ ನಿರ್ಧರಿಸುವಂತಿಲ್ಲ ಎಂಬ ಮಾತುಗಳು ಈಗಾಗಲೇ ಕೇಳಿ ಬರುತ್ತಿವೆ.
ಈ ಮಧ್ಯೆ ಪ್ರಧಾನಿ ಮೋದಿಗೆ ಹೋಲಿಸಿದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕ್ಷೇತ್ರವಾರು ಹೆಚ್ಚು ಮತಗಳನ್ನು ಪಡೆಯುವ ಮೂಲಕ ಎರಡು ಕ್ಷೇತ್ರಗಳಲ್ಲಿಯೂ ಗೆದ್ದಿದ್ದು ಮಾತ್ರವಲ್ಲದೇ ಗೆಲುವಿನ ಅಂತರವು ಮೋದಿಗಿಂತಲೂ ದುಪ್ಪಟ್ಟಿದೆ.
ಪ್ರಧಾನಿ ಮೋದಿ ಈ ಬಾರಿ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಮಾತ್ರ ಸ್ಪರ್ಧೆ ಮಾಡಿದ್ದರು. ಆದರೆ, ರಾಹುಲ್ ಉತ್ತರ ಪ್ರದೇಶದ ರಾಯ್‌ಬರೇಲಿ ಹಾಗೂ ಕೇರಳದ ವಯನಾಡ್‌ನಲ್ಲಿ ಸ್ಪರ್ಧೆ ಮಾಡಿದ್ದರು. ಮಂಗಳವಾರ ಹೊರ ಬಿದ್ದ ಫಲಿತಾಂಶದಲ್ಲಿ ಈ ಇಬ್ಬರು ನಾಯಕರು ಗೆಲುವು ಸಾಧಿಸಿದ್ದಾರೆ. ಆದರೆ, ಮೋದಿಗೆ ಹೋಲಿಸಿದರೆ ರಾಹುಲ್ ಗೆಲುವು ಹೆಚ್ಚು ಪ್ರಬಲವಾಗಿದೆ.
ಅಂತರ ಎಷ್ಟು ನೋಡಿ...
ಪ್ರಧಾನಿ ಮೋದಿ ವಾರಣಾಸಿಯಲ್ಲಿ 1,52,513 ಮತಗಳ ಅಂತದಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನು ರಾಹುಲ್ ಗಾಂಧಿ ರಾಯ್‌ಬರೇಲಿಯಲ್ಲಿ 3,90,030 ಮತಗಳು, ವಯನಾಡಿನಲ್ಲಿ 3,64,422 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮೋದಿಗಿಂತಲೂ ರಾಹುಲ್ ಮತಗಳ ಅಂತರ ಎರಡು ಪಟ್ಟು ಹೆಚ್ಚಿದೆ.
ಯಾರಿಗೆ ಎಷ್ಟು ಮತ ನೋಡಿ...
ಕ್ಷೇತ್ರವಾರು ನೋಡುವುದಾದರೆ ವಾರಣಾಸಿಯ ಒಟ್ಟಾರೆ ಮತದಲ್ಲಿ ಮೋದಿ ಶೇ 54.2 ರಷ್ಟು (6,12,970) ಮತ ಪಡೆದಿದ್ದಾರೆ. ರಾಹುಲ್ ಗಾಂಧಿ ರಾಯ್‌ಬರೇಲಿ ಕ್ಷೇತ್ರದ ಒಟ್ಟಾರೆ ಮತಗಳಲ್ಲಿ ಶೇ 66 ರಷ್ಟು (6,87,649) ಮತಗಳು ಮತಗಳನ್ನು ಪಡೆದಿದ್ದಾರೆ. ಇನ್ನು ವಯನಾಡು ಕ್ಷೇತ್ರದಲ್ಲಿ ಒಟ್ಟಾರೆ ಮತಗಳಲ್ಲಿ ಶೇ. 59.69 (6,47,445) ಮತಗಳನ್ನು ಪಡೆದಿದ್ದಾರೆ. ಈ ಮೂಲಕ ತಮ್ಮ ಕ್ಷೇತ್ರದ ಮತಗಳ ಪೈಕಿ ಮೋದಿಗಿಂತಲೂ ರಾಹುಲ್ ಹೆಚ್ಚು ಮತ ಪಡೆದಿದ್ದಾರೆ.
ರಾಹುಲ್ ಎರಡು ಕ್ಷೇತ್ರಗಳಲ್ಲಿಯೂ ಗೆಲುವು
ಪ್ರಧಾನಿ ಮೋದಿ ಒಂದೇ ಕ್ಷೇತ್ರದಲ್ಲಿ ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ, ರಾಹುಲ್ ಎರಡು ಕಡೆಗಳಲ್ಲಿ ಚುನಾವಣೆಗೆ ನಿಂತಿದ್ದು, ಎರಡರಲ್ಲಿಯೂ ಹೆಚ್ಚು ಮತ, ಭಾರೀ ಬಹುಮತದಿಂದ ಗೆದ್ದು ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ.