ಗುಜರಾತ್‌ನ ಕಛ್ ಕರಾವಳಿ ಪ್ರದೇಶದಲ್ಲಿ ₹130 ಕೋಟಿ ಮೌಲ್ಯದ ಕೊಕೇನ್ ವಶ
Wednesday, June 5, 2024
ಗಾಂಧಿಧಾಮ: ಗುಜರಾತ್‌ನ ಕಛ್ ಜಿಲ್ಲೆಯ ಗಾಂಧಿಧಾಮ ಪಟ್ಟಣದ ಬಳಿಯ ಕರಾವಳಿ ಪ್ರದೇಶದಲ್ಲಿ ₹130 ಕೋಟಿ ಮೌಲ್ಯದ ಕೊಕೇನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಸಿಕ್ಕಿಬೀಳುವುದನ್ನು ತಪ್ಪಿಸಲು ಕಳ್ಳಸಾಗಣೆದಾರರು ಕೊಕೇನ್ ಅನ್ನು ಕಡಲ ತೀರದಲ್ಲಿ ಬಚ್ಚಿಟ್ಟಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಕಛ್ ಪೂರ್ವ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಸಾಗರ್ ಬಾಗ್ಮಾರ್ ತಿಳಿಸಿದ್ದಾರೆ.
ಕಳೆದ ಎಂಟು ತಿಂಗಳ ಅವಧಿಯಲ್ಲಿ ಈ ಪ್ರದೇಶದಲ್ಲಿ ನಡೆಸಲಾದ ಎರಡನೇ ಅತಿ ದೊಡ್ಡ ಕಾರ್ಯಾಚರಣೆ ಇದಾಗಿದೆ.
ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಹಾಗೂ ವಿಶೇಷ ಕಾರ್ಯಾಚರಣೆಯ ತಂಡವು ಕೊಕೇನ್‌ನ 13 ಪ್ಯಾಕೆಟ್‌ಗಳನ್ನು ಜಪ್ತಿ ಮಾಡಿದೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಇದೇ ಪ್ರದೇಶದಲ್ಲಿ ₹800 ಕೋಟಿ ಮೌಲ್ಯದ ಕೊಕೇನ್ ವಶಪಡಿಸಿಕೊಳ್ಳಲಾಗಿತ್ತು.