ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಎಂ.ಜಿ.ಹೆಗಡೆ ಹೆಸರು ಬಹುತೇಕ ಅಂತಿಮ? ಶೀಘ್ರದಲ್ಲೇ ಜಿಲ್ಲಾ ಕಾಂಗ್ರೆಸ್ ಸಮಿತಿ, ಜಿಲ್ಲೆಯ ಎಲ್ಲಾ ಬ್ಲಾಕ್ ಸಮಿತಿಗಳು ಬರ್ಕಾಸ್ತು.!
ಮಂಗಳೂರು: ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಬದಲಾವಣೆ ಮಾತು ಜೋರಾಗಿಯೇ ಕೇಳಿ ಬರುತ್ತಿರುವ ಮಧ್ಯೆ ಇನ್ನೊಂದೆಡೆ ಸದಾ ಹೋರಾಟದ ಮನೋಭಾವವುಳ್ಳ ಎಂ ಜಿ ಹೆಗಡೆ ಅವರಿಗೆ ಈ ಸ್ಥಾನ ನೀಡುವಂತೆ ಒತ್ತಾಯ ಕೂಡ ಜೋರಾಗಿಯೇ ಕೇಳಿಬರುತ್ತಿದೆ.
ಎಂ ಜಿ ಹೆಗಡೆ ಕರಾವಳಿಯ ಭಾಗದಲ್ಲಿ ಯಾವುದೇ ಜಾತಿ ಬೆಂಬಲವಿಲ್ಲದೆ, ಗಾಡ್ ಫಾದರ್ ಇಲ್ಲದೇ ಸ್ವಂತ ವರ್ಚಸ್ಸಿನಿಂದ ಕಳೆದ 35 ವರ್ಷಗಳಿಂದ ಸಮಾಜದಲ್ಲಿ ಗುರುತಿಸಿಕೊಂಡವರು. ಇದಕ್ಕೆ ಮೂಲ ಕಾರಣ ಅವರ ಹೋರಾಟದ ಮನೋಭಾವ.
ಜೀವನದುದ್ದಕ್ಕೂ ಹೋರಾಟವನ್ನೇ ಮಾಡಿಕೊಂಡು ಬಂದಿರುವ ಎಂ ಜಿ ಹೆಗಡೆ, ಮೂಲತಃ ಸಂಘ ಪರಿವಾರವಾಗಿದ್ದರೂ, ಆಗ ಸುರತ್ಕಲ್ ಕ್ಷೇತ್ರದಲ್ಲಿ ಬಿಜೆಪಿ ಶಾಸಕನಾಗುವ ಸಾಧ್ಯತೆ ಇದ್ದರೂ ಪರಿವಾರದ ಕೋಮುವಾದ ವಿರೋಧಿಸಿ ಹೊರಬಂದವರು. ಡಾ.ಭಟ್ಟರ ಹೆಸರು ಹೇಳಲೂ ಹೆದರುತ್ತಿದ್ದ ದಿನಗಳಲ್ಲೇ ಅವರನ್ನು ಏಕಾಂಗಿಯಾಗಿ ಎದುರಿಸಿದವರು.
ಮಂಗಳೂರು ವಿವಿಯ ಪದವೀಧರ ಕ್ಷೇತ್ರದಿಂದ ಸೆನೆಟ್ ಗೆ 2 ಬಾರಿ, ಸಿಂಡಿಕೇಟ್ ಮತ್ತು ಆರ್ಥಿಕ ಸಮಿತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿ ಗೆದ್ದವರು. ಭಾರತದಲ್ಲಿ ಪ್ರಥಮ ಬಾರಿಗೆ ಫ್ಯಾಷನ್ ವಿಷಯದಲ್ಲಿ ಪದವಿ ಪ್ರಾರಂಭಿಸಿದ ಶಿಕ್ಷಣ ತಜ್ಞರು.
ಶಿರಸಿಯಿಂದ ಬಂದವರಾದರೂ ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು, ಮಂಗಳೂರು ಲಾ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮನಗೆದ್ದು, ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗೆದ್ದವರು.
ಜನಾರ್ದನ ಪೂಜಾರಿಯವರ ಜೊತೆ ಇಡೀ ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಚಾರ ಮಾಡಿದವರು. ಪ್ರತೀ ಚುನಾವಣೆಯಲ್ಲಿ ಕಾಂಗ್ರೆಸ್ ಪರ ತೊಡಗಿಸಿಕೊಂಡವರು. ಮಾತಿನ ಮಲ್ಲ, ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿಕೊಂಡ ಓರ್ವ ಕವಿ, ಬರಹಗಾರ.
ಮೈಕ್ರೋ ಲೆವೆಲ್ ನಿಂದ ಸಂಘಟನೆ ಕಟ್ಟಬಲ್ಲ ಅನುಭವವುಳ್ಳ ಹಿರಿಯರು. ಸಕ್ಕರೆ ನಾಡು ಮಂಡ್ಯದ ಜನರಿಗೆ ಪತ್ರ, ಜರೋಸಾ ಶಾಲೆಯ ಪ್ರಕರಣದಲ್ಲಿ ಸತ್ಯ ಶೋಧನೆ ಮೂಲಕ ಕೋಮುವಾದಿಗಳಿಗೆ ಸಿಂಹಸ್ವಪ್ನವಾಗಿ ಅವರ ಕೋಪಕ್ಕೆ ತುತ್ತಾದವರು.
ಹಿಂದೂ ಧರ್ಮದ ಬಗ್ಗೆ ಅಪಾರ ತಿಳುವಳಿಕೆಯೊಂದಿಗೆ ಮಾತನಾಡಿ ಕೋಮುವಾದಿಗಳ ಬಾಯಿ ಮುಚ್ಚಿಸಬಲ್ಲವರು. ಇದೀಗ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಬದಲಾವಣೆ ಮಾತು ಕೇಳಿ ಬರುತ್ತಿದೆ. ಎಲ್ಲವೂ ಬಂಟ ಕ್ರೈಸ್ತ ಮುಸ್ಲಿಂ ಬಿಲ್ಲವರಿಗೇ ಕೊಡುವುದನ್ನು ಬಿಡಬೇಕು. ಸಣ್ಣಪುಟ್ಟ ಜಾತಿಗೂ ಆದ್ಯತೆ ಸಿಗಬೇಕು.
ರಾಜಕೀಯ, ಶಿಕ್ಷಣ , ಸಾಹಿತ್ಯ, ಧಾರ್ಮಿಕ, ಸಾಮಾಜಿಕ ವಿಷಯಗಳಲ್ಲಿ ಜ್ಞಾನವುಳ್ಳ ಸಂಘಟನಾ ಶಕ್ತಿಯುಳ್ಳ ಇವರನ್ನು ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿ ಹೊಸ ಸಂಚಲನ ಮೂಡುವುದರಲ್ಲಿ ಯಾವ ಸಂಶಯವೂ ಇಲ್ಲ. ಹಲವಾರು ಕಾರ್ಯಕರ್ತರು ಈ ಕುರಿತು ಹೈ ಕಮಾಂಡ್ ನಾಯಕರಿಗೆ ಮನವಿ ಮಾಡಿದ್ದೂ ಆಗಿದೆ. ಇದೀಗ ಅಂತಿಮ ಮೂವರ ಪಟ್ಟಿಯಲ್ಲಿ ಎಂ.ಜಿ.ಹೆಗ್ಗಡೆ ಹೆಸರು ಸೇರಿಕೊಂಡಿದೆ ಎಂದು ತಿಳಿದು ಬಂದಿದೆ.