ಏಕರೂಪ ನಾಗರಿಕ ಸಂಹಿತೆ, ಅಗ್ನಿವೀರ್ ಬಗ್ಗೆ ಕ್ಯಾತೆ ಎತ್ತಿದ ಜೆಡಿಯು! ಸಂಕಷ್ಟದಲ್ಲಿ ನೂತನ ಸರಕಾರ
ನವದೆಹಲಿ: ಎನ್‌ಡಿಎ ಸರ್ಕಾರ ರಚನೆಗೂ ಮುನ್ನವೇ ಜೆಡಿಯು ಕ್ಯಾತೆ ತೆಗೆದಿದ್ದು, ಏಕರೂಪ ನಾಗರಿಕ ಸಂಹಿತೆ, ಅಗ್ನಿವೀರ್ ಬಗ್ಗೆ ಮರುಚಿಂತನೆ ಮಾಡಬೇಕಿದೆ ಎಂದು ಜೆಡಿಯುಹಿರಿಯ ನಾಯಕ ಕೆ.ಸಿ ತ್ಯಾಗಿ ಹೊಸ ವರಸೆ ಎತ್ತಿದ್ದಾರೆ.
ಒಂದೆಡೆ ಚಂದ್ರ ಬಾಬು ನಾಯ್ಡು ದೊಡ್ಡ ಬೇಡಿಕೆಯ ಪಟ್ಟಿಯೇ ಮುಂದಿಟ್ಟಿದ್ದಾರೆನ್ನುವ ಮಧ್ಯೆ ಇದೀಗ ಜೆಡಿಯು ಕೂಡ ತಗಾದೆ ಎತ್ತಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ ಎನ್ನಲಾಗಿದೆ.
ಅಗ್ನಿವೀರ್ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಹೊಸ ರೀತಿಯಲ್ಲಿ ಯೋಚಿಸಬೇಕಾಗಿದೆ. ಒಂದು ವರ್ಗದ ಮತದಾರರು ಅಗ್ನಿವೀರ್ ಯೋಜನೆ ಬಗ್ಗೆ ಕೋಪಗೊಂಡಿದ್ದಾರೆ. ಸಾರ್ವಜನಿಕರು ಪ್ರಶ್ನೆಗಳನ್ನು ಎತ್ತಿರುವ ನ್ಯೂನತೆಗಳ ಬಗ್ಗೆ ವಿವರವಾಗಿ ಚರ್ಚಿಸಬೇಕು ಮತ್ತು ಅವುಗಳನ್ನು ತೆಗೆದುಹಾಕಬೇಕು ಎಂದು ನಮ್ಮ ಪಕ್ಷ ಬಯಸುತ್ತದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಸಿಎಂ, ಏಕರೂಪ ನಾಗರಿಕ ಸಂಹಿತೆ (UCC) ಕುರಿತು ಕಾನೂನು ಆಯೋಗದ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ನಮ್ಮ ವಿರೋಧವಿಲ್ಲ ಆದರೆ ಮೈತ್ರಿ ಒಕ್ಕೂಟದೊಂದಿಗೆ ಮಾತನಾಡಿ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ಜಾತಿ ಆಧಾರಿತ ಜನಗಣತಿ ಕುರಿತು ಮಾತನಾಡಿದ ಕೆ.ಸಿ.ತ್ಯಾಗಿ, ದೇಶದ ಯಾವ ಪಕ್ಷವೂ ಜಾತಿ ಆಧಾರಿತ ಜನಗಣತಿಯನ್ನು ತಿರಸ್ಕರಿಸಿಲ್ಲ. ಜಾತಿ ಆಧಾರಿತ ಜನಗಣತಿ ಇಂದಿನ ಅಗತ್ಯವಾಗಿದೆ. ನಾವು ಅದನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ. ಯಾವುದೇ ಪೂರ್ವ ಷರತ್ತುಗಳಿಲ್ಲ. ಬೇಷರತ್ ಬೆಂಬಲವಿದೆ. ಆದರೆ ಬಿಹಾರಕ್ಕೆ ವಿಶೇಷ ಸ್ಥಾನಮಾನ ಸಿಗಬೇಕು ಎಂಬುದು ನಮ್ಮ ಮನಸ್ಸಲ್ಲಿದೆ ಎಂದರು.