ಮುಸ್ಲಿಮರ ಭಾವನೆಗಳಿಗೆ ಧಕ್ಕೆ ಹಿನ್ನೆಲೆ; ಕರ್ನಾಟಕದಲ್ಲಿ ʻಹಮಾರೆ ಬಾರಾಹ್ʼ ಸಿನಿಮಾ ಬಿಡುಗಡೆ-ಪ್ರಸಾರಕ್ಕೆ ನಿಷೇಧ

ಮುಸ್ಲಿಮರ ಭಾವನೆಗಳಿಗೆ ಧಕ್ಕೆ ಹಿನ್ನೆಲೆ; ಕರ್ನಾಟಕದಲ್ಲಿ ʻಹಮಾರೆ ಬಾರಾಹ್ʼ ಸಿನಿಮಾ ಬಿಡುಗಡೆ-ಪ್ರಸಾರಕ್ಕೆ ನಿಷೇಧ

ಬೆಂಗಳೂರು: ವಿವಿಧ ಮುಸ್ಲಿಂ ಸಂಘಟನೆಗಳ ಮನವಿ ಮೇರೆಗೆ ಸರ್ಕಾರವು ರಾಜ್ಯದಲ್ಲಿ ʻಹಮಾರೆ ಬಾರಾಹ್ʼ ಚಲನಚಿತ್ರ ಬಿಡುಗಡೆ ಮತ್ತು ಪ್ರಸಾರವನ್ನು ನಿಷೇಧಿಸಿ ಆದೇಶಿಸಿದೆ. ಶುಕ್ರವಾರ (ಇಂದು) ಬಿಡುಗಡೆಯಾಗಬೇಕಿದ್ದ  ʻಹಮಾರೆ ಬಾರಹ್‌ʼ ಚಿತ್ರವನ್ನು ಈಗಾಗಲೇ ದೇಶಾದ್ಯಂತ ವಿವಿಧೆಡೆ ನಿಷೇಧಿಸಲಾಗಿದೆ.

ಸಿನಿಮಾ ಟ್ರೈಲರ್‌ನಲ್ಲಿಯೇ ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತರುವಂತಹ ಅಂಶಗಳಿವೆ. ಆದ್ದರಿಂದ ಚಿತ್ರ ಬಿಡುಗಡೆ ಮಾಡದಂತೆ ಮುಸ್ಲಿಂ ಸಂಘಟನೆಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದವು. ವಿವಿಧ ಸಂಘಟನೆಗಳ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ ರಾಜ್ಯದಲ್ಲಿ ಚಲನಚಿತ್ರ ಬಿಡುಗಡೆಗೆ ನಿಷೇಧ ಹೇರಿದೆ. 

ವಿವಿಧ ಜಿಲ್ಲೆ ಹಾಗೂ ತಾಲೂಕುಗಳ ಮುಸ್ಲಿಂ ಸಂಘಗಳಿಂದ ಸ್ವೀಕೃತವಾಗಿರುವ ಮನವಿಗಳಲ್ಲಿ ಇತ್ತೀಚೆಗೆ ಖಾಸಗಿ ವಾಹಿನಿಯೊಂದು ʻಹಮಾರೆ ಬಾರಾಹ್ʼ ಎಂಬ ಚಲನಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದು, ಇದರಲ್ಲಿ ಮುಸ್ಲಿಂ ಧರ್ಮದ ಬಗ್ಗೆ ಪ್ರಚೋದನಾತ್ಮಕ ಮತ್ತು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ. ಆದ್ದರಿಂದ ಇಂತಹ ಚಿತ್ರಗಳಿಗೆ ಅನುಮತಿ ನೀಡಿದರೆ ಧರ್ಮ ಮತ್ತು ಜಾತಿಗಳ ಮಧ್ಯೆ ದ್ವೇಷ ಹುಟ್ಟಿಸುತ್ತದೆ. ದೇಶದಲ್ಲಿ ಒಂದು ಧರ್ಮವನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿ, ಕೋಮು ಸೌಹಾರ್ದತೆಗೆ ಧಕ್ಕೆಯುಂಟು ಮಾಡಿ, ದೇಶದಲ್ಲಿ ಅಶಾಂತಿ ಉಂಟು ಮಾಡುವುದು, ಮುಸ್ಲಿಂ ಧರ್ಮದ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಷಡ್ಯಂತ್ರವಾಗಿದೆ.

ಚಲನಚಿತ್ರಗಳು ಸಮಾಜದಲ್ಲಿ ಮಾರ್ಗದರ್ಶನವಾಗಬೇಕು, ಅದನ್ನು ಬಿಟ್ಟು ಧರ್ಮಗಳ ಮಧ್ಯೆ ದ್ವೇಷ ಭಾವನೆ ಹುಟ್ಟಿಸುವುದಲ್ಲ. ಅದರಂತೆ, ಜೂನ್‌ 7 ರಂದು ಬಿಡುಗಡೆಯಾಗಲಿರುವ ʻಹಮಾರೆ ಬಾರಾಹ್ʼ ಎಂಬ ವಿವಾದಾತ್ಮಕ ಸಿನಿಮಾವನ್ನು ಬಿಡುಗಡೆ ಮಾಡದಂತೆ ನಿಷೇಧ ಹೇರಬೇಕು ಎಂದು ಸಂಘಟನೆಗಳು ಮನವಿ ಮಾಡಿದ್ದವು. 

ಈ ಚಲನಚಿತ್ರದ ಟ್ರೈಲರ್ ಅನ್ನು ಪರಿಶೀಲಿಸಲಾಗಿ ʻಹಮಾರೆ ಬಾರಾಹ್ʼ ಚಲನಚಿತ್ರದಲ್ಲಿ ಪವಿತ್ರ ಗ್ರಂಥ ಕುರಾನ್ ಶರೀಫರಲ್ಲಿ ಇರುವ ಸೂರೆ ಎ ಬಕರ ದ ಸಾಲಿನಲ್ಲಿನ ಉಪದೇಶಗಳು ಹಾಗೂ ಸಂದೇಶಗಳ ಕುರಿತಂತೆ ನಿರ್ಮಾಪಕ ಹಾಗೂ ನಿರ್ದೇಶಕರು ತಪ್ಪು ಅಪಾರ್ಥ ಸೃಷ್ಟಿಸಿ, ಪ್ರಚೋದನಾತ್ಮಕ ಹಾಗೂ ಅವಹೇಳನಕಾರಿ ಹೇಳಿಕೆ ನೀಡಿ, ಕೆಲವು ಧರ್ಮದ ಜನರುಗಳನ್ನು ಕೆರಳಿಸುವ, ದ್ವೇಷ ಭಾವನೆ ಪ್ರಚೋದಿಸುವ ಮತ್ತು ಒಂದು ಸಮಾಜವನ್ನು ಅವಹೇಳನಕಾರಿಯಾಗಿ ಬಿಂಬಿಸುವ ಪ್ರಯತ್ನದಂತೆ ಕಾಣುತ್ತದೆ. ಒಂದು ಸಮಾಜವನ್ನು ಧರ್ಮದ ಆಧಾರದಲ್ಲಿ ವಿಶ್ಲೇಷಣೆ ಮಾಡುವುದು ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತರುವ ಸಂಭವವಿದೆ.

ʻಹಮಾರೆ ಬಾರಾಹ್ʼ ಚಲನಚಿತ್ರ ಬಿಡುಗಡೆಗೆ ಅನುಮತಿ ಕೊಟ್ಟಲ್ಲಿ ರಾಜ್ಯದ ಶಾಂತಿಗೆ ಭಂಗವುಂಟಾಗುತ್ತದೆ. ಜೊತೆಗೆ ಸೌಹಾರ್ದತೆ ಹದಗೆಡುವ ಸಾಧ್ಯತೆಯಿದ್ದು, ಮಹಿಳೆಯರ ಭಾವನೆಗಳಿಗೂ ಧಕ್ಕೆಯುಂಟಾಗುತ್ತದೆ ಎಂಬ ಸನ್ನಿವೇಶಗಳು ಕಂಡುಬಂದಿವೆ. ಚಲನಚಿತ್ರ ಬಿಡುಗಡೆಗೂ ಮುನ್ನ ಸಿನಿಮಾ (ರೆಗ್ಯೂಲೇಶನ್) ಆಕ್ಟ್ -1964ರ ಸೆಕ್ಷನ್ -15(2)ರಡಿ ಸಂಬಂಧಪಟ್ಟವರಿಗೆ ನೋಟೀಸನ್ನು ಜಾರಿ ಮಾಡಿ ವಿವರಣೆ ಪಡೆಯಬೇಕಾಗಿತ್ತು. ಆದರೆ ಸದರಿ ಚಲನಚಿತ್ರದ ನಿರ್ದೇಶಕ ಕಮಲ್ ಚಂದ್ರ ಮತ್ತು ನಿರ್ಮಾಪಕರಾದ ಬೀರೇಂದ್ರ ಭಗತ್, ರವಿ ಎಸ್.ಗುಪ್ತ, ಶಿಯೋ ಬಲಕ್ ಸಿಂಗ್, ಸಂಜಯ್ ನಾಗಪಾಲ್ ಹಾಗೂ ಮತ್ತಿತರರು ನೆರೆ ರಾಜ್ಯದಲ್ಲಿದ್ದು, ಸದರಿಯವರಿಗೆ ಕರ್ನಾಟಕ ಸಿನಿಮಾ (ರೆಗ್ಯೂಲೇಶನ್) ಆಕ್ಟ್ -1964ರ ಸೆಕ್ಷನ್ -15(2) ಅಡಿ ನೋಟೀಸು ಜಾರಿ ಮಾಡಿ, ಅವರುಗಳಿಂದ ವಿವರಣೆ ಪಡೆದು ಪರಿಶೀಲಿಸಲು ಸಾಕಷ್ಟು ಕಾಲಾವಕಾಶ ಇಲ್ಲದಿರುವುದರಿಂದ ಸಿನಿಮಾ ನಿಷೇಧಕ್ಕೆ ಆದೇಶಿಸಿದೆ. ಎರಡು ವಾರಗಳ ಅವಧಿಗೆ ಅಥವಾ ಮುಂದಿನ ಆದೇಶದ ವರೆಗೆ ರಾಜ್ಯದ ಯಾವುದೇ ಎಲೆಕ್ಟ್ರಾನಿಕ್ ಮಾಧ್ಯಮ, ಸಾಮಾಜಿಕ ಜಾಲತಾಣ, ಸಿನಿಮಾ ಮಂದಿರಗಳು, ಖಾಸಗಿ ಟಿವಿ ಚಾಲನ್‌ಗಳು, ಇತರೆ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವುದನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

Ads on article

Advertise in articles 1

advertising articles 2

Advertise under the article