ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರ ಹತ್ಯೆ; ಹತ್ಯೆ-ದ್ವೇಷದ ಅಪರಾಧಗಳನ್ನು ತಡೆಯಲು ಕಾನೂನು ಜಾರಿಗೊಳಿಸುವಂತೆ ಅಖಿಲ ಭಾರತ ಕಿಸಾನ್ ಸಭಾ ಒತ್ತಾಯ; ಮೃತರ ಕುಟುಂಬಕ್ಕೆ ತಲಾ ₹ 50 ಲಕ್ಷ ಪರಿಹಾರ-ಗಾಯಗೊಂಡ ವ್ಯಕ್ತಿಗೆ ₹ 20 ಲಕ್ಷ ಪರಿಹಾರಕ್ಕೆ ಆಗ್ರಹ
ನವದೆಹಲಿ: ಜಾನುವಾರು ಸಾಗಾಟ ಮಾಡುವವರ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಘಟನೆ ಛತ್ತೀಸಗಢದಲ್ಲಿ ನಡೆದಿದೆ. ಘಟನೆಯನ್ನು ಖಂಡಿಸಿ ಸೋಮವಾರ ಪ್ರತಿಭಟನೆ ನಡೆಸಿದ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಹತ್ಯೆ ಮತ್ತು ದ್ವೇಷದ ಅಪರಾಧಗಳನ್ನು ತಡೆಯಲು ಕಠಿಣ ಕಾನೂನು ಜಾರಿಗೊಳಿಸುವಂತೆ ಸಂಸತ್ತಿಗೆ ಒತ್ತಾಯಿಸಿದೆ.
ಜೂನ್ 7ರಂದು ಛತ್ತೀಸಗಢದ ಮಹಾಸಮುಂದ-ರಾಯಪುರ ಗಡಿಯಲ್ಲಿರುವ ಮಹಾನದಿ ಸೇತುವೆಯ ಮೇಲೆ ಜಾನುವಾರು ಸಾಗಾಟ ಮಾಡುವವರ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಇನ್ನೊಬ್ಬ ತೀವ್ರವಾಗಿ ಗಾಯಗೊಂಡಿದ್ದಾರೆ.
15-20 ಜನರ ಗುಂಪು ಒಡಿಶಾ ಕಡೆಗೆ ಪ್ರಯಾಣಿಸುತ್ತಿದ್ದ ಟ್ರಕ್ ಅನ್ನು ಹಿಂಬಾಲಿಸಿದೆ. ಮಹಾನದಿ ಸೇತುವೆಯ ಮೇಲೆ ಮೊಳೆಗಳನ್ನು ಹಾಕಿ ಟ್ರಕ್ ಅನ್ನು ನಿಲ್ಲಿಸಿ, ಚಾಲಕನ ಮೇಲೆ ತೀವ್ರ ಹಲ್ಲೆ ನಡೆದಿದೆ. ಘಟನೆಯಲ್ಲಿ ಚಾಲಕ ತೆಹ್ಸೀನ್ ಖುರೇಷಿ ಸ್ಥಳದಲ್ಲೇ ಮೃತಪಟ್ಟರೆ, ಚಾಂದ್ ಖಾನ್ ಎಂಬಾತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಲ್ಲದೇ ಟ್ರಕ್‌ನಲ್ಲಿದ್ದ ಸದ್ದಾಂ ಖುರೇಷಿ ಎಂಬಾತ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಪೂರ್ವಯೋಜಿತ ಕೊಲೆ ಮತ್ತು ದ್ವೇಷದ ಅಪರಾಧ ಎಂಬುದು ಸ್ಪಷ್ಟವಾಗಿದೆ ಎಂದು ಎಐಕೆಎಸ್ ಆರೋಪಿಸಿದೆ.
ಹೊಸದಾಗಿ ರಚನೆಯಾದ ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರ ಜಾನುವಾರು ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹತ್ಯೆ ಮತ್ತು ದ್ವೇಷದ ಅಪರಾಧಗಳನ್ನು ತಡೆಯಲು ಕಾನೂನು ಜಾರಿಗೊಳಿಸಬೇಕು. ಅಲ್ಲದೇ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಎಐಕೆಎಸ್ ಆಗ್ರಹಿಸಿದೆ.
ಘಟನೆಯಲ್ಲಿ ಮೃತರ ಕುಟುಂಬಕ್ಕೆ ತಲಾ ₹ 50 ಲಕ್ಷ ಪರಿಹಾರ ಮತ್ತು ತೀವ್ರವಾಗಿ ಗಾಯಗೊಂಡ ವ್ಯಕ್ತಿಗೆ ₹ 20 ಲಕ್ಷ ಪರಿಹಾರ ನೀಡಬೇಕು ಎಂದೂ ಸಂಘಟನೆ ಆಗ್ರಹಿಸಿದೆ.