ರಘುಪತಿ ಭಟ್ ಪರ ನಿಂತ ಪ್ರತಾಪ ಸಿಂಹ; ಬಿಜೆಪಿ ವರಿಷ್ಠರ ನಡೆಗೆ ಅಸಮಾಧಾನ; ಸಿಂಹ-ಭಟ್ ಹೇಳಿದ್ದೇನು....?

ರಘುಪತಿ ಭಟ್ ಪರ ನಿಂತ ಪ್ರತಾಪ ಸಿಂಹ; ಬಿಜೆಪಿ ವರಿಷ್ಠರ ನಡೆಗೆ ಅಸಮಾಧಾನ; ಸಿಂಹ-ಭಟ್ ಹೇಳಿದ್ದೇನು....?

ಮೈಸೂರು: ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಪರ ಟ್ವೀಟ್ ಮಾಡಿ ಬಿಜೆಪಿ ವರಿಷ್ಠರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಪ್ರತಾಪ ಸಿಂಹ, ಬಳಿಕ ಟ್ವೀಟ್'ನ್ನು ಅಳಿಸಿಹಾಕಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, 'ಉಡುಪಿಯ ಶಿಕ್ಷಣ ಸಂಸ್ಥೆಯೊಂದರಲ್ಲಿ ಸಮವಸ್ತ್ರ ಸಂಹಿತೆಯನ್ನು ಮುರಿದು ಬುರ್ಖಾ ಧರಿಸಿ ಕ್ಲಾಸಿಗೆ ಬಂದ ಜಿಹಾದಿ ಮನಸ್ಥಿತಿಯ ವಿರುದ್ಧ ಹೋರಾಡಿದ ರಘುಪತಿ ಭಟ್‌ ಅವರಿಗೆ ಎಂಎಲ್ಎ ಟಿಕೆಟ್ಟೂ ಸಿಗಲಿಲ್ಲ, ಎಂಎಲ್‌ಸಿ ಟಿಕೆಟ್ಟನ್ನೂ ಕೊಡಲಿಲ್ಲ. ಸಾಲದೆಂಬಂತೆ ಪಕ್ಷದಿಂದಲೂ ಉಚ್ಚಾಟನೆಗೆ ಒಳಗಾಗಿ ಬುರ್ಖಾ ಸ್ಟೂಡೆಂಟ್ ಆಲಿಯಾ ಅಸ್ಸಾದಿಯಿಂದ ಗೇಲಿಗೆ ಒಳಗಾಗುವ ಪರಿಸ್ಥಿತಿ ಹಿಂದುತ್ವವಾದಿಗಳಿಗೆ ಬಂದಿದ್ದು ದುರದೃಷ್ಟಕರ' ಎಂದು ಹೇಳಿದ್ದಾರೆ.

ವಿಧಾನ ಪರಿಷತ್‌ ನೈರುತ್ಯ ಪದವೀಧರರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ರಘುಪತಿ ಭಟ್‌ ಅವರಿಗೆ ಬಿಜೆಪಿ ಟಿಕೆಟ್‌ ನಿರಾಕರಿಸಿತ್ತು. ಹೀಗಾಗಿ ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ಈ ಸಂಬಂಧ ನೋಟಿಸ್‌ ನೀಡಿದ್ದ ರಾಜ್ಯ ಬಿಜೆಪಿ ಶಿಸ್ತು ಸಮಿತಿ, ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವುದು ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದಂತಾಗಿದೆ ಎಂದು ಎಚ್ಚರಿಸಿತ್ತು. ಬಳಿಕ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.

ಗೇಲಿ ಮಾಡಿದ್ದ ಆಲಿಯಾ

ರಘುಪತಿ ಭಟ್‌ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿದ ಕುರಿತು ಕೆಲವು ದಿನಗಳ ಹಿಂದೆ ಆಲಿಯಾ ಗೇಲಿ ಮಾಡಿದ್ದರು.

ಎಕ್ಸ್‌/ಟ್ವಿಟರ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದ ಅವರು, 'ದೇವನು ತಾನಿಚ್ಚಿಸಿದ್ದನ್ನು ಮಾಡಿಯೇ ತೀರುವನು, ವಾರ್ಷಿಕ ಪರೀಕ್ಷೆಗೆ 60 ದಿನಗಳು ಬಾಕಿ ಇರುವಾಗ ಹಿಜಾಬ್ ಧರಿಸಿದ ಏಕಮಾತ್ರ ಕಾರಣಕ್ಕೆ ನನ್ನನ್ನು ಕಾಲೇಜಿನಿಂದ ಹೊರದಬ್ಬಿ ನಿಮ್ಮ ಪಕ್ಷಕ್ಕೆ ದೊಡ್ಡ ಸಾಧನೆ ಮಾಡಿದ್ದೇನೆ ಎಂದು ತೋರಿಸಿದ್ದರಲ್ಲವೇ. ಆದರೆ, ಇಂದು ಅದೇ ಪಕ್ಷ ನಿಮ್ಮನ್ನು ಹೊರದಬ್ಬುವ ಆ ಕ್ಷಣವನ್ನು ನಾನು ನನ್ನ ಉಡುಪಿಯಲ್ಲೇ ನೋಡುವಂತಾಯಿತು' ಎಂದಿದ್ದರು.

'ಅಂದು ನಾನು ಉಚ್ಚಾಟಿತ ವಿದ್ಯಾರ್ಥಿ, ನಿಮಗೆ ಪಕ್ಷದಲ್ಲಿ ಪದವಿ. ಇಂದು ನಾನು ವಕೀಲೆ ಪದವಿ ವಿದ್ಯಾರ್ಥಿ, ನೀವು ಉಚ್ಚಾಟಿ ವ್ಯಕ್ತಿ' ಎಂದೂ ವ್ಯಂಗ್ಯವಾಡಿದ್ದರು.

ಪ್ರತಾಪ್‌ ಸಿಂಹ ಎಕ್ಸ್‌ ಪೋಸ್ಟ್‌ ಗೆ ಪ್ರತಿಕ್ರಿಯಿಸಿರುವ ರಘುಪತಿ ಭಟ್, "ಪ್ರತಾಪ್ ಸಿಂಹ ಅವರಿಗೆ ವಂದನೆಗಳು. ನಿಜವಾದ ಬಿಜೆಪಿ ನಾಯಕರಿಗೆ, ಕಾರ್ಯಕರ್ತರಿಗೆ ಮತ್ತು ಹಿಂದುತ್ವವಾದಿಗಳಿಗೆ ನನ್ನ ನಿಲುವು ಏನೆಂದು ಸ್ಪಷ್ಟವಾಗಿ ತಿಳಿದೆ. ಪರಿವಾರದ ಮನಸ್ಥಿತಿಯ ನಿಷ್ಠಾವಂತ ಕಾರ್ಯಕರ್ತರು ಎಂದಿಗೂ ನನ್ನ ಜೊತೆ ಇದ್ದಾರೆ. ನನ್ನ ಉಸಿರು ಇರುವವರೆಗೆ ಅವರ ಧ್ವನಿಯಾಗಿ ಇರುತ್ತೇನೆ." ಎಂದು ಪ್ರತಿಕ್ರಿಯಿಸಿದ್ದಾರೆ. 

Ads on article

Advertise in articles 1

advertising articles 2

Advertise under the article