ಅತ್ತೂರು ಚರ್ಚಿನ  ಅಕ್ರಮ ಸ್ವಾಗತ ಗೋಪುರವನ್ನು ಹತ್ತು ದಿನಗೊಳಗೆ ತೆರವುಗೊಳಿಸದಿದ್ದರೆ ಜಿಲ್ಲೆಯಾದ್ಯಂತ ಹೋರಾಟ: ಶ್ರೀಕಾಂತ್ ಶೆಟ್ಟಿ ಕಾರ್ಕಳ ಎಚ್ಚರಿಕೆ

ಅತ್ತೂರು ಚರ್ಚಿನ ಅಕ್ರಮ ಸ್ವಾಗತ ಗೋಪುರವನ್ನು ಹತ್ತು ದಿನಗೊಳಗೆ ತೆರವುಗೊಳಿಸದಿದ್ದರೆ ಜಿಲ್ಲೆಯಾದ್ಯಂತ ಹೋರಾಟ: ಶ್ರೀಕಾಂತ್ ಶೆಟ್ಟಿ ಕಾರ್ಕಳ ಎಚ್ಚರಿಕೆ

ಉಡುಪಿ: ಕಾರ್ಕಳ ತಾಲೂಕಿನ ಅತ್ತೂರು ಗ್ರಾಮದಲ್ಲಿ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗದಲ್ಲಿ ಅತ್ತೂರು ಸಂತ ಲಾರೆನ್ಸ್ ಚರ್ಚ್ ಭಾರೀ ಗಾತ್ರದ ಸ್ವಾಗತ ಗೋಪುರವನ್ನು ಅಕ್ರಮವಾಗಿ ಕಟ್ಟಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಗಾಳಿಗೆ ತೂರಿ ಈ ಗೋಪುರವನ್ನು ನಿರ್ಮಿಸಲಾಗಿದ್ದು, ಇದನ್ನು ಹತ್ತು ದಿನಗಳೊಳಗೆ ಜಿಲ್ಲಾಡಳಿತ ತೆರವುಗೊಳಿಸಬೇಕು. ತಪ್ಪಿದಲ್ಲಿ ಜಿಲ್ಲೆಯಾದ್ಯಂತ ಹಿಂದೂ ಸಮಾಜವನ್ನು ಸಂಘಟಿಸಿ ಇದರ ವಿರುದ್ಧ ಹೋರಾಟ ಕೈಗೆತ್ತಿಕೊಳ್ಳುತ್ತೇವೆ ಎಂದು ಹಿಂದೂ ಹಿತರಕ್ಷಣಾ ವೇದಿಕೆಯ ಶ್ರೀಕಾಂತ್ ಶೆಟ್ಟಿ ಕಾರ್ಕಳ ಎಚ್ಚರಿಕೆ ನೀಡಿದರು.

ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಅಕ್ರಮ ಗೋಪುರ ನಿರ್ಮಾಣದಲ್ಲಿ ಸರಕಾರಿ ಇಂಜಿನಿಯರ್ ಗಳು ಕೂಡ ಶಾಮೀಲಾಗಿದ್ದಾರೆ. ಒಂದು ವಾರದ ಹಿಂದೆ ರಾತೋರಾತ್ರಿ ಚರ್ಚ್ ಆಡಳಿತ ಮಂಡಳಿ ಈ ಕಬ್ಬಿಣದ ದ್ವಾರವನ್ನು ರಸ್ತೆಗೆ ಅಡ್ಡಲಾಗಿ ಕಟ್ಟಿದೆ. ಸಾರ್ವಜನಿಕರಿಂದ ಎರಡು ಆಕ್ಷೇಪಣಾ ಅರ್ಜಿಗಳು ಸಲ್ಲಿಕೆಯಾದರೂ ಲೋಕೋಪಯೋಗಿ ಅಧಿಕಾರಿಗಳು ಈ ಅಕ್ರಮ ದ್ವಾರ ನಿರ್ಮಾಣಕ್ಕೆ ಗುಪ್ತ ಸಹಕಾರ ನೀಡಿರುವುದನ್ನು ಗಮನಿಸಿದಾಗ ಇದರಲ್ಲಿ ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ಇದೆ ಎಂದು ಅವರು ಆರೋಪಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಇರುವ ಎಲ್ಲಾ ಧಾರ್ಮಿಕ ನಿರ್ಮಾಣಗಳನ್ನು ತೆರವುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶವಿದ್ದು, ಈ ಆದೇಶಕ್ಕೆ ಗೌರವ ನೀಡಿ ರಾಜ್ಯಾದ್ಯಂತ ಇರುವ ಹಿಂದೂ ಧಾರ್ಮಿಕ ಕೇಂದ್ರಗಳು ತಮ್ಮ ತಮ್ಮ ಸ್ವಾಗತ ಗೋಪುರ, ದೈವದ ಗುಡಿ, ನಾಗನಕಟ್ಟೆಗಳನ್ನು ತೆರವು ಮಾಡಿವೆ. 2009ರಲ್ಲಿ ಜಿಲ್ಲಾಧಿಕಾರಿಯ ನಿರ್ದೇಶನದ ಮೇರೆಗೆ ಕಾರ್ಕಳದಲ್ಲಿ ಸುಮಾರು 13 ಹಿಂದೂ ಧಾರ್ಮಿಕ ಸಂರಚನೆಗಳನ್ನು ತೆರವುಗೊಳಿಸಲಾಗಿತ್ತು. ಬೈಲೂರು ಸಮೀಪ ಇದ್ದ ಒಂದು ದರ್ಗಾ ಕೂಡ ತೆರವು ಮಾಡಲಾಗಿತ್ತು. ಆ ಬಳಿಕ ಯಾರಿಗೂ ಕೂಡ ಸರಕಾರಿ ಜಾಗದಲ್ಲಿ ದ್ವಾರ, ಸ್ವಾಗತ ಗೋಪುರ ಇನ್ನಿತರ ಧಾರ್ಮಿಕ ಕಟ್ಟೆಗಳನ್ನು ಕಟ್ಟಿಕೊಳ್ಳಲು ಅವಕಾಶ ನೀಡಲಾಗುತ್ತಿಲ್ಲ. ಆದರೆ ಈ ಚರ್ಚ್ ಆಡಳಿತ ಮಂಡಳಿಗೆ ಮಾತ್ರ ವಿಶೇಷವಾಗಿ ಅನುಮತಿ ದೊರೆತಿದೆ. ಇದರ ಹಿಂದೆ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿರುವ ಬಗ್ಗೆ ಶಂಕೆ ಇದ್ದು, ಈ ಬಗ್ಗೆ ಲೋಕಾಯುಕ್ತ ಇಲಾಖೆಗೆ ನಾವು ದೂರು ಸಲ್ಲಿಸಲಿದ್ದೇವೆ ಎಂದರು.

ಲೋಕೋಪಯೋಗಿ ಇಲಾಖೆಗೆ ಸೇರಿದ ಸ್ಥಳದಲ್ಲಿ ಕಟ್ಟಲಾಗಿರುವ ಈ ದ್ವಾರವನ್ನು ತೆರವುಗೊಳಿಸುವ ಹೊಣೆಗಾರಿಕೆ ಜಿಲ್ಲಾಧಿಕಾರಿಯವರದಾಗಿದ್ದು, ಅವರು ಕೂಡಲೇ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಚರ್ಚ್ ಜೊತೆ ಈ ಅಕ್ರಮದಲ್ಲಿ ಭಾಗಿಯಾಗಿರುವ ಲೋಕೋಪಯೋಗಿ ಅಧಿಕಾರಿಗಳ ಮೇಲೆ ಕೂಡ ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿದ್ದಲ್ಲಿ ಜಿಲ್ಲಾಧಿಕಾರಿ ಅವರ ವಿರುದ್ಧ ಬೃಹತ್ ಜನಾಂದೋಲನ ಹಾಗೂ ಪ್ರತಿಭಟನಾ ಸಭೆಯನ್ನು ನಡೆಸುತ್ತೇವೆ. ಅಲ್ಲದೆ, ಈ ಬಗ್ಗೆ ನ್ಯಾಯಾಲಯದಲ್ಲಿಯೂ ದಾವೆ ಹೂಡುತ್ತೇವೆ ಎಂದು ತಿಳಿಸಿದರು. 

ಹಿಂದೂ ಹಿತರಕ್ಷಣಾ ವೇದಿಕೆಯು ಕಳೆದ ಹಲವು ವರ್ಷಗಳಿಂದ ಅತ್ತೂರು ಸಂತ ಲಾರೆನ್ಸ್ ಚರ್ಚ್ ನಡೆಸಿರುವ ಭೂ ಅತಿಕ್ರಮಣದ ಬಗ್ಗೆ, ಹೋರಾಟ ನಡೆಸುತ್ತಿದೆ. ಚರ್ಚ್ ಸುಮಾರು 22 ಎಕರೆ ಸರಕಾರಿ ಕಂದಾಯ ಮತ್ತು ಅರಣ್ಯ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದು, ಇದರ ವಿರುದ್ಧ ಹೈಕೋರ್ಟ್ ನಲ್ಲಿ ನಮ್ಮ ಕಾನೂನು ಹೋರಾಟ ನಡೆಯುತ್ತಿದೆ. ಕಾನೂನು ಉಲ್ಲಂಘಿಸಿ ಕಟ್ಟಡ ನಿರ್ಮಾಣ, ಸರಕಾರಿ ಭೂಮಿಯ ದುರುಪಯೋಗ ಅರಣ್ಯ ನಾಶ, ಬೋಗಸ್ ದಾಖಲೆ ಸೃಷ್ಟಿಸಿ ಭೂಕಬಳಿಕೆ ಸೇರಿದಂತೆ ಹಲವಾರು ಕಾನೂನು ಬಾಹಿರ ಕೃತ್ಯಗಳನ್ನು ಈ ಚರ್ಚ್ ಆಡಳಿತ ಮಂಡಳಿ ಈಗಾಗಲೇ ನಡೆಸಿದೆ ಎಂದು ದೂರಿದರು.

Ads on article

Advertise in articles 1

advertising articles 2

Advertise under the article