ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾದ ವಿನೇಶ್ ಫೋಗಟ್!
ಪ್ಯಾರಿಸ್: ಅಧಿಕ ತೂಕದ ಕಾರಣದಿಂದ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ಬೆನ್ನಲ್ಲೇ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಧಿಕ ತೂಕದ ಕಾರಣ ಮಹಿಳೆಯರ ಫ್ರೀ ಸ್ಟೈಲ್ 50 ಕೆಜಿ ಕುಸ್ತಿ ಸ್ಪರ್ಧೆಯ ಫೈನಲ್ಗೂ ಮುನ್ನ ವಿನೇಶ್ ಫೋಗಟ್ ಅನರ್ಹಗೊಂಡಿದ್ದು, ಭಾರತಕ್ಕೆ ಪದಕವೊಂದು ಕೈ ತಪ್ಪಿದಂತಾಗಿದೆ. ಈ ಬೆನ್ನಲ್ಲೇ ಫೋಗಟ್ ನಿರ್ಜಲೀಕರಣ ಸಮಸ್ಯೆಯಿಂದಾಗಿ ಪ್ಯಾರಿಸ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ಕೆಲವೇ ನಿಮಿಷಗಳಲ್ಲಿ ವಿನೇಶ್ ನಿರ್ಜಲೀಕರಣ ಕಾರಣದಿಂದ ಮೂರ್ಛೆ ಹೋಗಿದ್ದಾರೆ, ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪ್ರಸ್ತುತ ವಿನೇಶ್‌ರನ್ನ ಒಲಿಂಪಿಕ್ ವಿಲೇಜ್‌ನ ಪಾಲಿಕ್ಲಿನಿಕ್‌ನಲ್ಲಿ ದಾಖಲಿಸಲಾಗಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
2016ರ ರಿಯೋ ಹಾಗೂ 2020ರ ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಪದಕದಿಂದ ವಂಚಿತರಾಗಿದ್ದ ವಿನೇಶ್ 2024ರಲ್ಲಿ ಫೈನಲ್ ತಲುಪಿ ಭಾರತಕ್ಕೆ ಪದಕ ಖಚಿತಪಡಿಸಿದ್ದರು. ಆದರೆ ಹೆಚ್ಚಿನ ತೂಕ ಹೊಂದಿದ ಹಿನ್ನೆಲೆಯಲ್ಲಿ ಫೋಗಟ್ ಫೈನಲ್‌ನಿಂದ ಅನರ್ಹರಾಗಿದ್ದಾರೆ.
ಮಂಗಳವಾರ ನಡೆದ ಕುಸ್ತಿ ಪಂದ್ಯದಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಸೋಲಿಸಿ ಒಲಿಂಪಿಕ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ವಿನೇಶ್ ಫೋಗಟ್ ಪಾತ್ರರಾಗಿದ್ದರು.
ಅನರ್ಹ ಯಾಕೆ?
ವಿನೇಶ್ 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಗರಿಷ್ಟ 100 ಗ್ರಾಂ ಹೆಚ್ಚು ತೂಕ ಹೊಂದಲು ಅವಕಾಶವಿದೆ. ಆದರೆ ಬುಧವಾರ (ಇಂದು) ದೇಹದ ತೂಕ 150 ಗ್ರಾಂ ಜಾಸ್ತಿ ಇದ್ದ ಕಾರಣ ಅವರನ್ನ ಫೈನಲ್‌ನಿಂದ ಅನರ್ಹ ಮಾಡಲಾಗಿದೆ. ಇದರಿಂದ ಸೆಮಿಫೈನಲ್‌ನಲ್ಲಿ ಫೋಗಟ್ ವಿರುದ್ಧ ಪರಾಭವಗೊಂಡಿದ್ದ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರಿಗೆ ಫೈನಲ್ ತಲುಪುವ ಅವಕಾಶ ಸಿಕ್ಕಿದೆ ಎಂದು ವರದಿಯಾಗಿದೆ.