ಕ್ರಿಕೆಟಿಗೆ ಕನ್ನಡಿಗ ಕೆ.ಎಲ್.ರಾಹುಲ್ ಗುಡ್ ಬೈ? ವೈರಲ್ ಆದ ಸುದ್ದಿಯ ಅಸಲಿಯತ್ತೇನು? ಇಲ್ಲಿದೆ ನೋಡಿ...
ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕನ್ನಡಿಗ KL Rahul ನಿವೃತ್ತಿ ಘೋಷಿಸಿರುವ ಸುದ್ದಿಯೊಂದು ಕಾಡ್ಗಿಚ್ಚಿನಂತೆ ಹಬ್ಬಿದ್ದು, ವ್ಯಾಪಕ ವೈರಲ್ ಆಗುತ್ತಿದೆ.
ಭಾರತ ತಂಡದ ಸ್ಟಾರ್ ಕ್ರಿಕೆಟಿಗ ಕನ್ನಡಿಗ ಕೆಎಲ್ ರಾಹುಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿರುವ ಸುದ್ದಿಯೊಂದು ವ್ಯಾಪಕ ವೈರಲ್ ಆಗುತ್ತಿದೆ.
ಕೆಎಲ್ ರಾಹುಲ್ ವೃತ್ತಿಪರ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ರಾಹುಲ್ ಅವರ ಇನ್‌ಸ್ಟಾಗ್ರಾಮ್ ಖಾತೆಯಿಂದ ಅಪ್ಲೋಡ್ ಆಗಿದೆ ಎಂದು ಹೇಳಲಾಗುತ್ತಿರುವ ಸ್ಟೋರಿಯ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಹರಿದಾಡುತ್ತಿದೆ.
ಅಪ್ಲೋಟ್ ಮಾಡಲಾದ ಪೋಸ್ಟ್ ನಲ್ಲಿ, '‘ಸಾಕಷ್ಟು ಬಾರಿ ಯೋಚಿಸಿದ ಬಳಿಕ ನಾನು ವೃತ್ತಿಪರ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದೇನೆ. ಈ ನಿರ್ಧಾರವು ಸುಲಭವಲ್ಲ, ಏಕೆಂದರೆ ಅನೇಕ ವರ್ಷಗಳಿಂದ ಕ್ರೀಡೆ ನನ್ನ ಜೀವನದ ಪ್ರಮುಖ ಭಾಗವಾಗಿದೆ. ನನ್ನ ವೃತ್ತಿಜೀವನದುದ್ದಕ್ಕೂ ನನ್ನನ್ನು ಬೆಂಬಲಿಸಿದ ನನ್ನ ಕುಟುಂಬ, ಸ್ನೇಹಿತರು, ತಂಡದ ಸಹ ಆಟಗಾರರು ಮತ್ತು ಅಭಿಮಾನಿಗಳಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ.
ಮೈದಾನದ ಒಳಗೆ ಮತ್ತು ಹೊರಗೆ ನಾನು ಗಳಿಸಿದ ಅನುಭವಗಳು ಮತ್ತು ನೆನಪುಗಳಿಗೆ ನಿಜವಾಗಿಯೂ ಬೆಲೆಕಟ್ಟಲಾಗದು. ನನ್ನ ದೇಶವನ್ನು ಪ್ರತಿನಿಧಿಸಿದ್ದಕ್ಕೆ ಮತ್ತು ಅನೇಕ ಪ್ರತಿಭಾವಂತ ವ್ಯಕ್ತಿಗಳೊಂದಿಗೆ ಆಡಲು ನನಗೆ ಅವಕಾಶ ಸಿಕ್ಕಿತು, ಈ ಬಗ್ಗೆ ಗೌರವವಿದೆ. ಮುಂಬರುವ ಹೊಸ ಅಧ್ಯಾಯಕ್ಕೆ ನಾನು ಉತ್ಸುಕನಾಗಿದ್ದರೂ, ಈ ಅದ್ಭುತ ಪ್ರಯಾಣದ ಭಾಗವಾಗಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು’ ಎಂದು ಬರೆಯಲಾಗಿದೆ.
ನಿಜವೇ..?
ಕೆಎಲ್ ರಾಹುಲ್ ನಿವೃತ್ತಿ ಘೋಷಿಸಿದ್ದಾರೆ ಎನ್ನಲಾಗುತ್ತಿರುವ ಈ ಇನ್ಸ್ಟಾ ಸ್ಟೋರಿ ಸುಳ್ಳಾಗಿದೆ. ರಾಹುಲ್ ಅವರು ಈರೀತಿಯ ಯಾವುದೇ ಸ್ಟೋರಿಯನ್ನು ಪೋಸ್ಟ್ ಮಾಡಿಲ್ಲ. ನಿವೃತ್ತಿ ಪೋಸ್ಟ್ ವೈರಲ್ ಆಗುವ ಮುನ್ನ ರಾಹುಲ್ ಅವರು ತಮ್ಮ ಅಧಿಕೃತ ಇನ್ಸ್ಟಾದಲ್ಲಿ ಮತ್ತೊಂದು ಸ್ಟೋರಿ ಹಂಚಿಕೊಂಡಿದ್ದರು. ಇದರಲ್ಲಿ ‘ನಾನು ಮಹತ್ವದ ಘೋಷಣೆ ಮಾಡಬೇಕಿದೆ’ ಎಂದು ಬರೆದುಕೊಂಡಿದ್ದರು. ಆದರೆ ರಾಹುಲ್ ಏನನ್ನು ಘೋಷಿಸಲಿದ್ದಾರೆ ಎಂಬುದನ್ನು ತಿಳಿಸಿರಲಿಲ್ಲ. ಇದಕ್ಕೆ ರೆಕ್ಕೆ-ಪುಕ್ಕ ಕಟ್ಟಿ ಹಲವು ನಕಲಿ ಪೋಸ್ಟ್‌ಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಅಂದಹಾಗೆ ಕೆಎಲ್ ರಾಹುಲ್ ನಿವೃತ್ತಿ ಕುರಿತು ಬಿಸಿಸಿಐ ಆಗಲಿ ಅಥವಾ ಕೆಎಲ್ ರಾಹುಲ್ ಆಗಲಿ ಈ ವರೆಗೂ ಯಾವುದೇ ರೀತಿಯ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ಈ ಪೋಸ್ಟ್ ನಕಲಿ ಎಂದು ಹೇಳಲಾಗಿದೆ.
ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್, ಕನ್ನಡಿಗ ಕೆಎಲ್ ರಾಹುಲ್ ಅವರು ಇತ್ತೀಚೆಗೆ ಮುಕ್ತಾಯಗೊಂಡ ಶ್ರೀಲಂಕಾ ಪ್ರವಾಸದಲ್ಲಿ ಏಕದಿನ ಸರಣಿ ಆಡಿದ್ದರು. ದೀರ್ಘ ಸಮಯದ ಬಳಿಕ ಮೈದಾನಕ್ಕಿಳಿದ ರಾಹುಲ್ ಮತ್ತೆ ಕಳಪೆ ಪ್ರದರ್ಶನ ನೀಡಿದ್ದರು.