ಯಕ್ಷ ವೇಷಭೂಷಣ ಧರಿಸಿ ಭಿಕ್ಷಾಟನೆ, ಅಸಭ್ಯ ವರ್ತನೆ; ಯಕ್ಷಗಾನ ಕಲೆಗೆ ಅಪಮಾನ ಮಾಡುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಿ: ಬಿಜೆಪಿ ದಕ್ಷಿಣ ಕನ್ನಡ-ಉಡುಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠ ಒತ್ತಾಯ
ಉಡುಪಿ: ಯಕ್ಷಗಾನ ಕಲೆಗೆ ಸಂಬಂಧಿಸಿದ ಯಕ್ಷ ವೇಷಭೂಷಣಗಳನ್ನು ಧರಿಸಿ ಭಿಕ್ಷಾಟನೆ ಹಾಗೂ ಅಸಭ್ಯ ವರ್ತನೆ ಮಾಡುವವ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠ ವತಿಯಿಂದ ಉಡುಪಿ ಎಸ್ಪಿ ಹಾಗೂ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗಿದೆ.
ಈ ಬಗ್ಗೆ ಪ್ರಕೋಷ್ಠದ ದ.ಕ ಜಿಲ್ಲಾ ಸಂಚಾಲಕ ಸರಪಾಡಿ ಅಶೋಕ್ ಶೆಟ್ಟಿ ಅವರು ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶೋತ್ಸವ ಸೇರಿದಂತೆ ವಿವಿಧ ಸಭೆ ಸಮಾರಂಭಗಳಲ್ಲಿ ಯಕ್ಷಗಾನ ವೇಷಗಳನ್ನು ಧರಿಸಿಕೊಂಡು ಕಲೆಗೆ ಅಪಮಾನ ಮಾಡುತ್ತಿದ್ದಾರೆ. ಇದು ವೃತ್ತಿಪರ ಕಲಾವಿದರಿಗೆ ತುಂಬಾ ನೋವುಂಟು ಮಾಡಿದೆ. ಯಕ್ಷಗಾನದ ವೇಷಭೂಷಣ, ಬಣ್ಣಗಾರಿಕೆಗೆ ತನ್ನದೇ ಆದ ಧಾರ್ಮಿಕ ಮಹತ್ವವಿದೆ. ಅದನ್ನು ಮರೆತು ಈ ರೀತಿಯಲ್ಲಿ ಕಲೆಯ ಗರಿಮೆಗೆ ಧಕ್ಕೆ ತರುತ್ತಿರುವುದು ಬೇಸರ ಸಂಗತಿ ಎಂದರು.
ಈ ಕುರಿತಂತೆ ಪ್ರಕೋಷ್ಠದ ವತಿಯಿಂದ ಎಸ್ಪಿಯವರಿಗೆ ಮನವಿ ಸಲ್ಲಿಸಿದಾಗ ಅವರು ತಕ್ಷಣ ಸ್ಪಂದಿಸಿ ಎಲ್ಲಾ ಪೋಲಿಸ್ ಠಾಣಾ ವ್ಯಾಪ್ತಿಗಳಿಗೆ ಸುತ್ತೋಲೆ ಕಲಿಸಿ, ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಅದೇ ರೀತಿ ಉಡುಪಿ ಜಿಲ್ಲೆಯಲ್ಲಿ ಕೂಡ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.
ಯಕ್ಷಗಾನ ವೇಷಭೂಷಣಗಳು ಹಾಗು ಪರಿಕರಗಳನ್ನು ಬಾಡಿಗೆ ನೀಡುತ್ತಿರುವ ಸಂಸ್ಥೆಗಳು ಕಲಾವಿದರ ನೋವನ್ನು ಅರ್ಥಮಾಡಿಕೊಳ್ಳಬೇಕು. ಇಂತಹ ಪರಿಕರಗಳನ್ನು ಬಾಡಿಗೆಗೆ ನೀಡಬಾರದು. ವೇಷಧಾರಿಗಳಿಂದ ಅಸಭ್ಯ ವರ್ತನೆ ಕಂಡುಬಂದಲ್ಲಿ ಸಾರ್ವಜನಿಕರು ಸ್ಥಳೀಯ ಪೋಲಿಸ್ ಠಾಣೆ ಅಥವಾ 112 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕೋರಿದರು.
ಸುದ್ದಿಗೋಷ್ಟಿಯಲ್ಲಿ ಪ್ರಕೋಷ್ಠದ ಉಡುಪಿ ಜಿಲ್ಲಾ ಸಹ ಸಂಚಾಲಕ ಪ್ರಕಾಶ್ ಕಾಮತ್, ಉಡುಪಿ ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ್ ಶ್ರೀನಿಧಿ ಹೆಗ್ಡೆ, ರಾಜಶೇಖರ್, ಸುರೇಂದ್ರ ಪಣಿಯೂರು ಉಪಸ್ಥಿತರಿದ್ದರು.