ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯಿಂದ ವಿಧಾನಸೌಧ ಮುಂದೆ ಧರಣಿ; ಮುತ್ತಿಗೆ ಯತ್ನ, ಪೊಲೀಸರ ವಶಕ್ಕೆ
ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಪೊಲೀಸ್ ತನಿಖೆಗೆ ವಿಶೇಷ ನ್ಯಾಯಾಲಯ ಆದೇಶಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ರಾಜ್ಯದಲ್ಲಿ ವಿರೋಧ ಪಕ್ಷ ಬಿಜೆಪಿಯ ಧರಣಿ ತೀವ್ರವಾಗಿದೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹಾಗೂ ವಿಧಾನಪರಿಷತ್ ವಿರೋಧ ಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ವಿಧಾನಸೌಧ ಮಹಾತ್ಮಗಾಂಧಿ ಪ್ರತಿಮೆ ಎದುರು ನಡೆದ ಧರಣಿಯಲ್ಲಿ ಪಕ್ಷದ ಹಲವು ಶಾಸಕರು, ಮುಖಂಡರು ಇಂದು ಪಾಲ್ಗೊಂಡಿದ್ದರು.
ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಘೋಷಣಾ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಪೊಲೀಸರ ತನಿಖೆಗೆ ಇಲ್ಲಿನ ವಿಶೇಷ ನ್ಯಾಯಾಲಯ ಆದೇಶಿಸಿದ್ದು, ಅವರ ವಿರುದ್ಧ ಎಫ್‌ಐಆರ್ ದಾಖಲಿಸಲು ವೇದಿಕೆ ಸಜ್ಜಾಗಿದೆ.
ಸಿದ್ದರಾಮಯ್ಯ ಅವರ ಪತ್ನಿ ಬಿಎಂ ಪಾರ್ವತಿ ಅವರಿಗೆ 14 ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಮೇಲೆ ತನಿಖೆ ನಡೆಸಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೀಡಿದ್ದ ಅನುಮತಿಯನ್ನು ಹೈಕೋರ್ಟ್ ಎತ್ತಿ ಹಿಡಿದ ಮರುದಿನವೇ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಆದೇಶ ಹೊರಬಿದ್ದಿದೆ.
ಮಾಜಿ ಮತ್ತು ಚುನಾಯಿತ ಸಂಸದರು/ಶಾಸಕರಿಗೆ ಸಂಬಂಧಿಸಿದ ಕ್ರಿಮಿನಲ್ ಮೊಕದ್ದಮೆಗಳನ್ನು ವ್ಯವಹರಿಸುವ ವಿಶೇಷ ನ್ಯಾಯಾಲಯವು ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ ದೂರಿನ ಮೇರೆಗೆ ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ ತನಿಖೆಯನ್ನು ಪ್ರಾರಂಭಿಸಲು ಆದೇಶ ಹೊರಡಿಸಿದೆ.
ಮೊನ್ನೆ ಬುಧವಾರ ವಿಶೇಷ ನ್ಯಾಯಾಲಯದ ಆದೇಶದ ಹೊರಬಿದ್ದ ಕೂಡಲೇ ಬಿಜೆಪಿ ನಾಯಕರು ಸಿಎಂ ರಾಜೀನಾಮೆಗೆ ಒತ್ತಾಯಿಸುತ್ತಿದ್ದು ಪ್ರತಿಭಟನೆ ಮುಂದುವರಿಸಿದ್ದಾರೆ. ತನಿಖೆಯನ್ನು ಸ್ವತಂತ್ರ ಸಂಸ್ಥೆ ಸಿಬಿಐಗೆ ವಹಿಸಿ, ಮುಕ್ತ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ಒತ್ತಾಯಿಸುತ್ತಿದ್ದಾರೆ.
ಹೈಕೋರ್ಟ್ ಆದೇಶ ಹೊರಬಿದ್ದಲ್ಲಿಂದ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಲೇ ಬಂದಿದ್ದಾರೆ.
ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರ ಪತ್ನಿಗೆ ಮೈಸೂರಿನ ಮುಂದುವರಿದ ಪ್ರದೇಶದಲ್ಲಿ ಮುಡಾದಿಂದ ‘ಸ್ವಾಧೀನಪಡಿಸಿಕೊಂಡಿರುವ’ ಭೂಮಿಗೆ ಹೋಲಿಸಿದರೆ ಹೆಚ್ಚಿನ ಆಸ್ತಿ ಮೌಲ್ಯ ಹೊಂದಿರುವ ಪರಿಹಾರದ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಮುಡಾದಿಂದ ಪಾರ್ವತಿ ಅವರಿಗೆ 50:50 ಅನುಪಾತದ ಯೋಜನೆಯಡಿ ಅವರ 3.16 ಎಕರೆ ಜಮೀನಿಗೆ ಬದಲಾಗಿ ನಿವೇಶನಗಳನ್ನು ಮಂಜೂರು ಮಾಡಿತ್ತು, ಅಲ್ಲಿ ಅದು ವಸತಿ ಬಡಾವಣೆಯನ್ನು ಅಭಿವೃದ್ಧಿಪಡಿಸಿತು.
ವಿವಾದಾತ್ಮಕ ಯೋಜನೆಯಡಿಯಲ್ಲಿ, ವಸತಿ ಬಡಾವಣೆಗಳನ್ನು ರೂಪಿಸಲು ಅವರಿಂದ ಸ್ವಾಧೀನಪಡಿಸಿಕೊಂಡಿರುವ ಅಭಿವೃದ್ಧಿಯಾಗದ ಭೂಮಿಗೆ ಬದಲಾಗಿ ಭೂ ಕಳೆದುಕೊಳ್ಳುವವರಿಗೆ ಮುಡಾ ಅಭಿವೃದ್ಧಿ ಹೊಂದಿದ ಭೂಮಿಯಲ್ಲಿ ಶೇಕಡಾ 50ರಷ್ಟು ಜಮೀನನ್ನು ಮಂಜೂರು ಮಾಡಿದೆ.
ಮೈಸೂರು ತಾಲೂಕಿನ ಕಸಬಾ ಹೋಬಳಿಯ ಕಾಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿ 3.16 ಎಕರೆ ಜಮೀನಿನಲ್ಲಿ ಪಾರ್ವತಿ ಅವರಿಗೆ ಯಾವುದೇ ಕಾನೂನು ಹಕ್ಕು ಇಲ್ಲ ಎಂದು ಆರೋಪಿಸಲಾಗಿದೆ.
ವಿಧಾನಸೌಧಕ್ಕೆ ಮುತ್ತಿಗೆ ಯತ್ನ, ಕರೆದೊಯ್ದ ಪೊಲೀಸರು: ಸಿಎಂ ವಿರುದ್ಧ ಲೋಕಾಯುಕ್ತ ತನಿಖೆಗೆ ಕೋರ್ಟ್ ಆದೇಶ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಈ ಹಿನ್ನಲೆ ಅರವಿಂದ ಬೆಲ್ಲದ, ಸುನಿಲ್ ಕುಮಾರ್, ಅಶ್ವಥ್ ನಾರಾಯಣ್, ಜನಾರ್ದನ ರೆಡ್ಡಿ, ಎನ್ ರವಿ ಕುಮಾರ್ ಹಾಗೂ ಛಲವಾದಿ ನಾರಾಯಣಸ್ವಾಮಿ ಅವರನ್ನು ಸೇರಿ ಪ್ರತಿಭಟನಾನಿರತ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು, ಬಳಿಕ ಬಸ್ನಲ್ಲಿ ಕರೆದೊಯ್ದಿದ್ದಾರೆ.