ಅಮಾಯಕ ಯುವಕರೇ ಈ ಕಟು ವಂಚನೆಯ ಬಗ್ಗೆ ಜಾಗೃತರಾಗಿರಿ! ಹಣದ ಆಸೆಗೆ ಬಲಿಯಾಗುವ ಮುನ್ನ ಚಿಂತಿಸಿ.....
ಬ್ಯಾಂಕ್ ಎಕೌಂಟ್ ಮಾಡಿಸಿ ಹಣದ ಆಸೆ ಹುಟ್ಟಿಸಿ ಯುವಕರನ್ನು, ವಿಶೇಷತಃ ವಿದ್ಯಾರ್ಥಿಗಳನ್ನು ಅಪಾಯಕ್ಕೆ ತಳ್ಳಿ ಹಾಕುವ ಪ್ರಕರಣಗಳು ನಡೆಯುತ್ತಿವೆ.
ದೇರಳಕಟ್ಟೆ, ಸುರತ್ಕಲ್, ಮಂಗಳೂರು ಕಡೆಗಳಲ್ಲಿ ಈ ಜಾಲ ಸಕ್ರಿಯವಾಗಿರುವುದಾಗಿ ಬ್ಯಾಂಕ್ ಅಧಿಕಾರಿಗಳು ನೀಡಿದ ಮಾಹಿತಿಯನ್ವಯ ಇದನ್ನು ಬರೆಯುತ್ತಿದ್ದೇನೆ.
ವಿದ್ಯಾರ್ಥಿಗಳಿಗೆ ಇಂದಿನ ಕಾಲದಲ್ಲಿ ಹಣದ ಅವಶ್ಯಕತೆ ಇರುತ್ತದೆ. ಬೇಕಾದಷ್ಟು ಹಣ ನೀಡುವಂತಹ ಆರ್ಥಿಕತೆ ಮನೆಯಲ್ಲಿ ಇರುವುದಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ಸುಲಭದಲ್ಲಿ ಹಣ ಗಳಿಸುವ ದಾರಿಯನ್ನು ಯಾರಾದರೂ ಹೇಳಿಕೊಟ್ಟರೆ ಆಸೆ ಹುಟ್ಟುವುದು ಸಹಜ. ಆದರೆ ಈ ಆಸೆಗಾಗಿ ವಂಚನೆಯ ಜಾಲಕ್ಕೆ ಸಿಲುಕಿ ಪೊಲೀಸ್ ಕೇಸಾಗಿ ಶಿಕ್ಷಣವನ್ನೂ ಭವಿಷ್ಯತ್ತನ್ನೂ ಹಾಳು ಮಾಡಿಕೊಂಡ ವಿದ್ಯಾರ್ಥಿಗಳ ಕಥೆ ಧಾರಾಳ ಕೇಳಿ ಬರುತ್ತಿದೆ.
ಇತ್ತೀಚೆಗೆ ಕೇರಳದ ಒಬ್ಬ ಅಮಾಯಕ ಯುವಕ ಇದೇ ಮೋಸದ ಜಾಲಕ್ಕೆ ಬಲಿಯಾಗಿ ದುಬೈ ಜೈಲಿನಲ್ಲಿದ್ದಾನೆ. ನಡೆದ ಆರ್ಥಿಕ ವಂಚನೆಯ ಅಗಾಧತೆ ತಿಳಿದಾಗ ಆ ಯುವಕ ಪಕ್ಕನೆ ಜೈಲು ಮುಕ್ತನಾಗುವ ಆಸೆಯನ್ನೇ ಕೈ ಬಿಡಬೇಕಾಗುತ್ತದೆ ಎನ್ನಲಾಗಿದೆ.
ಅತ್ಯಂತ ದುಃಖದ ವಿಷಯವೆಂದರೆ ಆ ಯುವಕ ನಿರಪರಾಧಿ. ಲಕ್ಷಾಂತರ ದೀನಾರ್ ಮುಕ್ಕಿದವರು ತಪ್ಪಿಸಿಕೊಂಡಿದ್ದಾರೆ. ಹಾಗೆ ತಪ್ಪಿಸಿಕೊಳ್ಳುವ ಅವಕಾಶಕ್ಕಾಗಿಯೇ ವಂಚಕರ ಜಾಲವು ಇಂತಹ ಅಮಾಯಕರನ್ನು ಬಲಿಕೊಡುತ್ತಿರುವುದು.
" ನಿನ್ನ ಅಕೌಂಟ್ ಗೆ ನಾವು ಒಂದು ಮೊತ್ತ ಹಾಕುತ್ತೇವೆ, ನೀನು ನಿನ್ನ ಕಮಿಶನ್ ಇಟ್ಟುಕೊಂಡು ನಾವು ಕೊಡುವ ಅಕೌಂಟ್ ಗೆ ಟ್ರಾನ್ಸ್ ಫರ್ ಮಾಡಿಕೊಂಡರಾಯಿತು. ನಿನಗೆ ಬೇರೆ ಏನೂ ಕೆಲಸವಿಲ್ಲ, ಇಷ್ಟೇ ಕೆಲಸದಿಂದ ನಿನಗೆ ಸುಲಭದಲ್ಲಿ ಉತ್ತಮ ಆದಾಯ ಮಾರ್ಗವಾಗುತ್ತದೆ" ಎಂದು ಹೇಳಿದ್ದನ್ನು ನಂಬಿ ಪಾಪ ಆ ಯುವಕ ಅದಕ್ಕೆ ಒಪ್ಪಕೊಂಡು ಅವರು ಹೇಳಿದ್ದ ಹಾಗೆ ಕೆಲಕಾಲ ಟ್ರಾನ್ಸ್ ಫರ್ ಕೆಲಸವನ್ನು ಮಾಡಿಕೊಂಡಿದ್ದ. ಅದರಿಂದ ಅವನಿಗೆ ತಕ್ಕಮಟ್ಟಿನ ಆದಾಯವೂ ಬರುತ್ತಿತ್ತು.
ಆದರೆ ದುಬೈ ಪೊಲೀಸರು ಬಂದು ಹೆಗಲ ಮೇಲೆ ಕೈಯಿಟ್ಟಾಗಲೇ ಆ ಬಡಪಾಯಿ ಯುವಕನಿಗೆ ಗೊತ್ತಾದುದು ತಾನು ಭಾರೀ ದೊಡ್ಡ ಒಂದು ಮಾಫಿಯಾದ ಕೊಂಡಿಯಾಗಿ ಕೆಲಸ ಮಾಡುತ್ತಿದೆ ಎಂಬುದು! ದುಬೈನಲ್ಲಿ ಅನೇಕರ ಅಕೌಂಟ್ ನಿಂದ ಹಣವನ್ನು ಲಪಟಾಯಿಸಿದ್ದ ಆ ಗ್ಯಾಂಗನ್ನು ಪೊಲೀಸರಿಗೆ ಇದುವರೆಗೂ ಪತ್ತೆ ಮಾಡಲಾಗಲಿಲ್ಲ. ವಂಚಕರ ಜಾಲವು ಅಷ್ಟೊಂದು ವ್ಯವಸ್ಥಿತವಾಗಿ ಕಾರ್ಯಾಚರಿಸುತ್ತಿದೆ.
ಇದೀಗ ನಮ್ಮ ಕಡೆಗಳಲ್ಲೂ ಇಂತಹದ್ದೇ ಜಾಲವು ಕಾರ್ಯಾಚರಿಸಿ ವಿದ್ಯಾರ್ಥಿಗಳನ್ನು ಬಲಿ ಗೊಡುತ್ತಿದೆ. ವಿದ್ಯಾರ್ಥಿಗಳೂ ಉಳಿದವರೂ ಈ ಬಗ್ಗೆ ತುಂಬಾ ಜಾಗ್ರತೆ ವಹಿಸಬೇಕಾಗಿದೆ. ಯಾರೇ ಹೇಳಿದರೂ ಎಷ್ಟೇ ಆಪ್ತನಾಗಿದ್ದರೂ ಸಹಪಾಠಿಗಳಾಗಿದ್ದರೂ ನಂಬಿಬಿಟ್ಟು ಬಲಿಯಾಗದಂತೆ ಜಾಗ್ರತೆ ವಹಿಸಬೇಕು.
ಯಾರು ಹೇಳಿದರೂ ಹೊಸ ಖಾತೆ ತೆರೆಯಬೇಡಿ, ಅಪರಿಚಿತರಿಗೆ ಖಾತೆ ತೆರೆಯಲು ಇಂಟ್ಯಡ್ಯೂಸ್ ಕೊಡಬೇಡಿ, ನಿಮ್ಮ ಖಾತೆ ನಂಬ್ರವನ್ನು ಯಾರಿಗೂ ಶೇರ್ ಮಾಡಬೇಡಿ. ನಿನ್ನ ಅಕೌಂಟ್ ಗೆ ಹಣ ಬರ್ತದೆ, ಅದನ್ನು ಕ್ಯಾಶ್ ಮಾಡಿ ಕೊಡು ಅಥವಾ ಬೇರೊಂದು ಖಾತೆಗೆ ವರ್ಗಾಯಿಸು ಮುಂತಾಗಿ ಯಾರೇ ಹೇಳಿದರೂ ಅದರಲ್ಲಿ ವಂಚನೆಯಿದೆಯೆಂಬುದನ್ನು ಅರಿತು ಕೊಳ್ಳಿ. ಸುಮ್ಮನೆ ಪೊಲೀಸ್ ಕೇಸ್ ಗೆ ಬಲಿಯಾಗದಿರಿ.
- ಡಿ. ಐ.ಅಬೂಬಕರ್ ಕೈರಂಗಳ |