ಹೈಕೋರ್ಟ್ ತೀರ್ಪು "ರಾಜಕೀಯ ಪ್ರೇರಿತ" ಹೇಳಿಕೆ; ಸಚಿವ ಜಮೀರ್ ವಿರುದ್ಧ ಸಂಸದ ಕೋಟ ಆಕ್ರೋಶ
Friday, September 27, 2024
ಉಡುಪಿ: ಸಚಿವ ಜಮೀರ್ ಅಹಮದ್ ಅವರು ಸಿದ್ದರಾಮಯ್ಯ ಅಭಿಯೋಜನೆ ಕುರಿತು ಹೈಕೋರ್ಟ್ ನೀಡಿದ ತೀರ್ಪನ್ನು "ರಾಜಕೀಯ ಪ್ರೇರಿತ" ಎಂದು ಹೇಳಿದ್ದಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಹೈಕೋರ್ಟ್ ನ್ಯಾಯಮೂರ್ತಿಗಳು ನೀಡಿದ ತೀರ್ಪನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಲೆಬಾಗಿ ಸ್ವೀಕಾರ ಮಾಡಬೇಕು. ಅದು ಇಷ್ಟವಿಲ್ಲದಿದ್ದರೆ ಮೇಲ್ಮನವಿ ಸಲ್ಲಿಸಬೇಕು. ಅದು ಬಿಟ್ಟು ಒಬ್ಬ ನ್ಯಾಯಮೂರ್ತಿಯ ತೀರ್ಪನ್ನು ಟೀಕೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈ ಎಂದು ಹೇಳಿದವರ ಬಾಯಿಂದ ಇದಕ್ಕಿಂತ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಹೇಳಿರುವ ಕೋಟ, ಸಿದ್ದರಾಮಯ್ಯನವರು ತಮ್ಮ ಜೊತೆ ಇಂತಹ ಸಚಿವರನ್ನು ಇಟ್ಟುಕೊಂಡಿದ್ದಾರೆ ಎಂಬುದು ನೋವಿನ ಸಂಗತಿ. ಅವರ ಹೇಳಿಕೆಯನ್ನು ಮುಖ್ಯಮಂತ್ರಿಗಳು ಯಾವ ರೀತಿ ಸಹಿಸಿಕೊಳ್ಳುತ್ತಾರೋ ನೋಡಬೇಕು ಎಂದು ಹೇಳಿದ್ದಾರೆ.