ಬಿಜೆಪಿಗೆ ಅಧಿಕೃತವಾಗಿ ಸೇರಿದ ಕ್ರಿಕೆಟಿಗ ರವೀಂದ್ರ ಜಡೇಜಾ!
ಜಾಮ್‌ನಗರ: ಕ್ರಿಕೆಟಿಗ ರವೀಂದ್ರ ಜಡೇಜಾ ಅವರು ಪ್ರಸ್ತುತ ನಡೆಯುತ್ತಿರುವ ಸದಸ್ಯತ್ವ ಅಭಿಯಾನದಲ್ಲಿ ಭಾರತೀಯ ಜನತಾ ಪಕ್ಷಕ್ಕೆ(ಬಿಜೆಪಿ) ಸೇರಿದ್ದಾರೆ ಎಂದು ಅವರ ಪತ್ನಿ ಮತ್ತು ಕೇಸರಿ ಪಕ್ಷದ ಶಾಸಕಿ ರಿವಾಬಾ ಜಡೇಜಾ ಅವರು ಗುರುವಾರ ಹೇಳಿದ್ದಾರೆ.
ಇಂದು ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ರಿವಾಬಾ ಜಡೇಜಾ, ರವೀಂದ್ರ ಜಡೇಜಾ ಬಿಜೆಪಿ ಸದಸ್ಯತ್ವ ಪಡೆದ ಕಾರ್ಡ್‌ನ ಫೋಟೋಗಳನ್ನು "ಸದಾಸ್ಯತ ಅಭಿಯಾನ 2024" ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಹಂಚಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಆರಂಭಿಸಿದ ಸದಸ್ಯತ್ವ ಅಭಿಯಾನ ಭಾಗವಾಗಿ ಜಡೇಜಾ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದು ರಿವಾಬಾ ಜಡೇಜಾ ಅವರು ವರದಿಗಾರರಿಗೆ ತಿಳಿಸಿದ್ದಾರೆ.
ಈ ವರ್ಷ ಕಳೆದ ಜೂನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ T20 ವಿಶ್ವಕಪ್ ವಿಜಯದ ನಂತರ ಭಾರತದ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು T20 ಅಂತರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತಿ ಘೋಷಿಸಿದ್ದರು. ಇದೀಗ ಬಿಜೆಪಿ ಸೇರುವ ಮೂಲಕ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದಾರೆ.
ರಿವಾಬಾ 2019ರಲ್ಲಿ ಬಿಜೆಪಿ ಪಕ್ಷವನ್ನು ಸೇರಿದ್ದರು. 2022 ರ ವಿಧಾನಸಭಾ ಚುನಾವಣೆಯಲ್ಲಿ ಜಾಮ್‌ನಗರ್ ಉತ್ತರ ಕ್ಷೇತ್ರದಿಂದ ಕಣಕ್ಕೆ ಇಳಿದು ಆಪ್ ಅಭ್ಯರ್ಥಿ ಕರ್ಶನ್‌ಬಾಯ್ ಕಾರ್ಮುರ್ ರವರನ್ನು ಸೋಲಿಸಿದ್ದರು.