ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ! ನಾನ್ಯಾಕೆ ರಾಜೀನಾಮೆ ಕೊಡಬೇಕು, ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇನೆ:  ಸಿದ್ದರಾಮಯ್ಯ

ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ! ನಾನ್ಯಾಕೆ ರಾಜೀನಾಮೆ ಕೊಡಬೇಕು, ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇನೆ: ಸಿದ್ದರಾಮಯ್ಯ

ಬೆಂಗಳೂರು: ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ, ನಾನ್ಯಾಕೆ ರಾಜೀನಾಮೆ ಕೊಡಬೇಕು, ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಪುನರುಚ್ಛರಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ. ಸಿಎಂ ಸ್ಥಾನದಲ್ಲಿ ಮುಂದುವರಿಯಲು ಮುಜುಗರವಾಗುವುದಿಲ್ಲವೇ ಎಂದು ಕೇಳಲು ಬಿಜೆಪಿಯವರಿಗೆ ಯಾವ ನೈತಿಕತೆ ಇದೆ, ಗೋಧ್ರಾ ಹತ್ಯಾಕಾಂಡ ಸಮಯದಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಇಂದಿನ ಪ್ರಧಾನಿ ನರೇಂದ್ರ ಮೋದಿಯವರು ರಾಜೀನಾಮೆ ಕೊಟ್ಟಿದ್ದರೇ, ಇಂದು ಮೋದಿ ಸರ್ಕಾರದ ಸಂಪುಟದಲ್ಲಿ ಸಚಿವರಾಗಿರುವ ಕುಮಾರಸ್ವಾಮಿ ಮೇಲೆ ಆರೋಪಗಳಿವೆಯಲ್ಲವೇ, ಅವರು ಜಾಮೀನು ಮೇಲೆ ಇದ್ದಾರೆ ಅವರು ರಾಜೀನಾಮೆ ನೀಡಿದ್ದಾರೆಯೇ, ಹಾಗಾದರೆ ಅವರಿಗೆ ಮುಜುಗರವಾಗುವುದಿಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ. ನನ್ನ ರಾಜೀನಾಮೆ ಕೇಳುವವರು ಕುಮಾರಸ್ವಾಮಿಗೆ ರಾಜೀನಾಮೆ ಕೊಡಿಸಲಿ, ಅವರು ಯಾರ ಮಂತ್ರಿಮಂಡಲದಲ್ಲಿ, ಯಾವ ಪಕ್ಷದ ಸರ್ಕಾರದಲ್ಲಿ ಇರುವುದು ಹೇಳಿ, ಅವರು ಮೊದಲು ರಾಜೀನಾಮೆ ಕೊಡಬೇಕಲ್ಲವೇ ಎಂದು ಕೇಳಿದರು.

ನೂರಾರು ಜನ ಪ್ರಾಣಕಳೆದುಕೊಂಡ ಗೋಧ್ರಾ ಹತ್ಯಾಕಾಂಡ ಸಮಯದಲ್ಲಿ ಮೋದಿಯವರೇ ರಾಜೀನಾಮೆ ಕೊಟ್ಟಿಲ್ಲ, ನಾನು ಏನೂ ತಪ್ಪು ಮಾಡಿಲ್ಲ, ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದರು.

ಮುಡಾ ಹಗರಣ ಸಂಬಂಧ ಹೈಕೋರ್ಟ್ ತೀರ್ಪು ಹೊರಬಿದ್ದ ಹಿನ್ನೆಲೆಯಲ್ಲಿ ಆರೋಪಿ ಸ್ಥಾನದಲ್ಲಿರುವ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಲ್ಲಿ ಬಲವಾದ ಒತ್ತಾಯ, ಆಗ್ರಹ ಕೇಳಿಬರುತ್ತಿದೆ. ಇಂದು ಬಿಜೆಪಿ ನಾಯಕರು ವಿಧಾನಸೌಧ ಮುಂದೆ ಪ್ರತಿಭಟನೆ ಕೂಡ ನಡೆಸಿದರು.

ಪಕ್ಷದ ಹಿತದೃಷ್ಟಿಯಿಂದ ರಾಜೀನಾಮೆ ಕೊಡಲಿ: ಇನ್ನು ಸ್ವಪಕ್ಷದಲ್ಲಿಯೂ ಕೂಡ ಕೆಲವರಿಂದ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹ ವ್ಯಕ್ತವಾಗಿದೆ. ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಕೆ.ಬಿ.ಕೋಳಿವಾಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೇರೆ ಬೇರೆ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಅಲ್ಲೂ ಸಿಎಂ ವಿಚಾರ ಪ್ರಸ್ತಾಪಿಸಿ ವಿಪಕ್ಷಗಳು ಮಾತನಾಡುತ್ತಿವೆ. ಆದ್ದರಿಂದ ಪಕ್ಷಕ್ಕೆ ಮುಜುಗರ ಆಗುತ್ತಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಸಲಹೆ ನೀಡಿದರು.

ತನಿಖೆ ಎದುರಿಸಿ ಸಿಎಂ ನಿಷ್ಕಳಂಕಿತರು ಎಂಬುದು ಸಾಬೀತಾದ ಮೇಲೆ ಮತ್ತೆ ಅವರೇ ಮುಖ್ಯಮಂತ್ರಿ ಆಗಲಿ. ಸಿಎಂ ರಾಜೀನಾಮೆ ಕೊಡಲ್ಲ ಎನ್ನುತ್ತಿರುವುದು ಅವರ ಅಭಿಪ್ರಾಯ. ಅವರು ರಾಜೀನಾಮೆ ಕೊಡಬೇಕು ಎಂಬುದು ನಮ್ಮ ಅಭಿಪ್ರಾಯ ಎಂದರು.

Ads on article

Advertise in articles 1

advertising articles 2

Advertise under the article