ಅ.3ರಿಂದ 12ರ ವರೆಗೆ ಉಡುಪಿ-ಉಚ್ಚಿಲ ದಸರಾ! ಅ. 12ರಂದು ವೈಭವದ ಶೋಭಾಯಾತ್ರೆ ಮೆರವಣಿಗೆ

ಅ.3ರಿಂದ 12ರ ವರೆಗೆ ಉಡುಪಿ-ಉಚ್ಚಿಲ ದಸರಾ! ಅ. 12ರಂದು ವೈಭವದ ಶೋಭಾಯಾತ್ರೆ ಮೆರವಣಿಗೆ

 

ಉಡುಪಿ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಮೂರನೇ ವರ್ಷದ "ಉಡುಪಿ-ಉಚ್ಚಿಲ ದಸರಾ-2024" ಕಾರ್ಯಕ್ರಮವು ಅಕ್ಟೋಬರ್ 3ರಿಂದ 12ರ ವರೆಗೆ ಶ್ರೀಮತಿ ಶಾಲಿನಿ ಡಾ| ಜಿ. ಶಂಕರ್‌ ಸಭಾಂಗಣದಲ್ಲಿ ಜರಗಲಿದೆ ಎಂದು ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ| ಜಿ. ಶಂಕರ್‌ ಹೇಳಿದ್ದಾರೆ. 

ಉಚ್ಚಿಲ ಮೊಗವೀರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ದಸರಾ ಮಹೋತ್ಸವಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಆಕರ್ಷಕ ಮಂಟಪದಲ್ಲಿ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿ 10 ದಿನಗಳ ಕಾಲ ಶಾಸ್ತ್ರೋಕ್ತವಾಗಿ ಪೂಜಿಸಲಾಗುವುದು. ಅ. 12ರಂದು ವೈಭವದ ಶೋಭಾಯಾತ್ರೆಯೊಂದಿಗೆ ಜಲಸ್ತಂಭನ ನಡೆಯಲಿದೆ ಎಂದರು.

ಎಂಆರ್‌ಜಿ ಗ್ರೂಫ್‌ ಅಧ್ಯಕ್ಷ ಡಾ. ಕೆ. ಪ್ರಕಾಶ್‌ ಶೆಟ್ಟಿ ಬಂಜಾರ ಅವರ ಪ್ರಾಯೋಜಕತ್ವದಲ್ಲಿ ಪಡುಬಿದ್ರಿಯಿಂದ ಕಾಪು ಸಮುದ್ರ ತೀರದ ದೀಪಸ್ತಂಭದವರೆಗೆ ನಡೆಸಲಾಗುವ ವಿದುದ್ದೀಪಾಲಂಕಾರವು ಅ.2ರಂದು ಸಂಜೆ 6.30ಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.

ಅ.3ರಂದು ಬೆಳಿಗ್ಗೆ 9ಕ್ಕೆ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹಗಳನ್ನು ಕ್ಷೇತ್ರದ ತಂತ್ರಿ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಮತ್ತು ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ. 10 ಗಂಟೆಗೆ ಜಿಲ್ಲಾಧಿಕಾರಿ ಸಹಿತ ಗಣ್ಯರು ಮತ್ತು ದಾನಿಗಳ ಉಪಸ್ಥಿತಿಯಲ್ಲಿ ಉಚ್ಚಿಲ ದಸರಾ ಉದ್ಘಾಟಿಸಲಾಗುವುದು. ಬಳಿಕ ಫಲಪುಷ್ಪ ಪ್ರದರ್ಶನ, ಗುಡಿ ಕೈಗಾರಿಕೆ ಪ್ರಾತ್ಯಕ್ಷಿಕೆ, ಜೀವಂತ ಮೀನುಗಳ ಪ್ರದರ್ಶನ, ಕೇಂದ್ರ ಮತ್ತು ರಾಜ್ಯ ಸರಕಾರಗಳಲ್ಲಿ ಲಭ್ಯವಿರುವ ಮೀನುಗಾರಿಕೆ ಯೋಜನೆಗಳ ಮಾಹಿತಿ ಮತ್ತು ಮೀನುಗಾರಿಕೆ ಪರಿಕರಗಳ ಪ್ರದರ್ಶನ ಮುಂತಾದವುಗಳ ಪ್ರದರ್ಶನ ಉದ್ಘಾಟನೆ ಹಾಗೂ ದ.ಕ. ಮೊಗವೀರ ಮಹಾಜನ ಸಂಘದ 100ನೇ ವರ್ಷದ ನೆನಪಿಗೆ ನವೀಕರಿಸಲ್ಪಟ್ಟ ನೂತನ ಆಡಳಿತ ಕಛೇರಿಯ ಶುಭಾರಂಭಗೊಳ್ಳಲಿದೆ. ಸಂಜೆ 5ಕ್ಕೆ 10 ದಿನಗಳ ಕಾಲ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಭಜನೆ, ಧಾರ್ಮಿಕ ಸಭಾ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ ಎಂದರು.

ಅ.12ರಂದು ವೈಭವದ ಶೋಭಾಯಾತ್ರೆ...

ಅ. 12ರಂದು ಮಧ್ಯಾಹ್ನ 2.30ಕ್ಕೆ ವಿಸರ್ಜನಾ ಪೂಜೆ, ಮಧ್ಯಾಹ್ನ 3ಕ್ಕೆ ಶೋಭಾಯಾತ್ರೆಗೆ ಚಾಲನೆ, ಸಂಜೆ 5 ಗಂಟೆಗೆ ಶೋಭಾಯಾತ್ರೆ ಹೊರಟು ಕಾಪು ದೀಪಸ್ತಂಭದ ಬಳಿಯಲ್ಲಿ ಜಲಸ್ತಂಭನಗೊಳ್ಳಲಿದೆ.

ಈ ಸಂದರ್ಭದಲ್ಲಿ ಬೋಟುಗಳಿಂದ ಸಮುದ್ರ ಮಧ್ಯೆ ಭವ್ಯ ವಿದ್ಯುದ್ದೀಪಾಲಂಕಾರ, ಆಕರ್ಷಕ ಸುಡುಮದ್ದು ಪ್ರದರ್ಶನ ಹಾಗೂ ನವದುರ್ಗೆಯರಿಗೆ, ಶಾರದಾ ಮಾತೆ ಹಾಗೂ ಅಂಬಾರಿ ಹೊತ್ತ ಆನೆಗೆ ಡ್ರೋನ್‌ ಮೂಲಕ ಪುಷ್ಪಾರ್ಚನೆ, ರಾತ್ರಿ ಸುಮಂಗಲೆಯವರಿಂದ ಸಾಮೂಹಿಕ ಮಂಗಳಾರತಿ, ಅರ್ಚಕರಿಂದ ಗಂಗಾರತಿ ನಡೆಯಲಿದೆ ಎಂದು ಅವರು  ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ದ.ಕ.ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌, ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ್‌ ಸುವರ್ಣ, ದಸರಾ ಸಮಿತಿ ಅಧ್ಯಕ್ಷ ವಿನಯ್‌ ಕರ್ಕೇರ ಮಲ್ಪೆ, ಮಹಾಜನ ಸಂಘದ ಉಪಾಧ್ಯಕ್ಷ ಮೋಹನ್‌ ಬೇಂಗ್ರೆ, ಪ್ರ.ಕಾರ್ಯದರ್ಶಿ, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್‌, ಜ.ಕಾರ್ಯದರ್ಶಿ ಸುಜಿತ್‌ ಸಾಲ್ಯಾನ್‌, ಪ್ರಬಂಧಕ ಸತೀಶ್‌ ಅಮೀನ್‌ ಪಡುಕೆರೆ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article