ಅಭಿಮಾನಿಗಳ ಅಭಿನಂದನೆಗಳ ಮಹಾಪೂರದಲ್ಲಿ ಮಿಂದೆದ್ದ ಸಚಿವ ಈಶ್ವರ್ ಖಂಡ್ರೆ! ಬೆಂಗಳೂರಿನಲ್ಲಿ 2500 ಕೋಟಿ ರೂ.ಮೌಲ್ಯದ 103 ಎಕರೆ ಅರಣ್ಯ ಒತ್ತುವರಿ ತೆರವು
ಬೆಂಗಳೂರು: ಬೆಂಗಳೂರು ನಗರದಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದ್ದು, ಮತ್ತೆರಡು ಎಕರೆ ಅರಣ್ಯ ಭೂಮಿ ಮರು ವಶಕ್ಕೆ ಪಡೆಯಲಾಗಿದೆ. ಆ ಮೂಲಕ ಅರಣ್ಯ ಅಧಿಕಾರಿಗಳು ಬೆಂಗಳೂರಲ್ಲಿ ಈವರೆಗೆ 103 ಎಕರೆಗೂ ಹೆಚ್ಚು ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಿದ್ದಾರೆ. ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಕಾರ್ಯ ವೈಖರಿಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಯಲಹಂಕ ಬಳಿಯ ಮಾರಸಂದ್ರದ ಗಸ್ತು ಸರ್ವೆ ನಂ.182ರಲ್ಲಿ ಒತ್ತುವರಿ ಮಾಡಲಾಗಿದ್ದ 2 ಎಕರೆ 10 ಗುಂಟೆ ಅರಣ್ಯ ಜಮೀನನ್ನು ತೆರವು ಮಾಡಿ, ಅಲ್ಲಿ ಸ್ಥಳೀಯ ಜಾತಿಯ ಸಸಿಗಳನ್ನು ನೆಟ್ಟು ಅರಣ್ಯ ಬೆಳೆಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಭೈರಾರೆಡ್ಡಿ ಎಂಬವರು ಅರಣ್ಯ ಇಲಾಖೆಗೆ ಸೇರಿದ 2.10 ಎಕರೆ ಜಮೀನು ಒತ್ತುವರಿ ಮಾಡಿದ್ದರು. ಈ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿದ್ದ ಬೆಂಗಳೂರು ನಗರ ಅರಣ್ಯಾಧಿಕಾರಿಗಳು ಜೆಸಿಬಿಗಳೊಂದಿಗೆ ಕಾರ್ಯಾಚರಣೆ ನಡೆಸಿ ಭೂಮಿಯನ್ನು ವಶಕ್ಕೆ ಪಡೆದಿದ್ದಾರೆ. ಇದರ ಮಾರುಕಟ್ಟೆ ಮೌಲ್ಯ ಸುಮಾರು 40 ಕೋಟಿ ರೂ.ಗಳಿಗೂ ಅಧಿಕ ಎಂದು ಹೇಳಲಾಗಿದೆ.
ಈಶ್ವರ ಖಂಡ್ರೆ ಅವರ ಕಟ್ಟುನಿಟ್ಟಿನ ಕ್ರಮದಿಂದ ಭೂಗಳ್ಳರು ಬೆಚ್ಚಿ ಬಿದ್ದಿದ್ದ್ದಾರೆ. ಅರಣ್ಯ ಸಂರಕ್ಷಣೆ ಮತ್ತು ಪರಿಸರದ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅವರು ಕೈಗೊಂಡಿರುವ ಈ ಕ್ರಮದ ಪರಿಣಾಮ, ದೊಡ್ಡ ಪ್ರಮಾಣದ ಅರಣ್ಯ ಭೂಮಿಯನ್ನು ಕಾನೂನಾತ್ಮಕವಾಗಿ ಮರುಸ್ವಾಧೀನ ಮಾಡಲಾಗಿದೆ.
ಈಶ್ವರ ಖಂಡ್ರೆ ಅವರ ನಿರ್ಧಾರವು ಪರಿಸರ ಕಾನೂನು ಪಾಲನೆಗೆ ಒತ್ತು ನೀಡುವುದರ ಜೊತೆಗೆ, ಪ್ರಕೃತಿ ಸಂರಕ್ಷಣೆಗಾಗಿ ಸರ್ಕಾರದ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದೆ. ಇವು ಮುಂದುಹೋದಂತೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಅರಣ್ಯ ಭೂಮಿ ಒತ್ತುವರಿಗಳನ್ನು ತೆರವುಗೊಳಿಸಲು ಕ್ರಮ ಜರುಗಿಸಲಾಗುವುದು ಎಂದು ಈಗಾಗಲೇ ಸಂದೇಶ ನೀಡಲಾಗಿದೆ.
ಖಂಡ್ರೆಯವರ ಈವೊಂದು ಮಹತ್ಕಾರ್ಯಕ್ಕೆ ನೆಟ್ಟಿಗರು, ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ತಮ್ಮ ಅಭಿನಂದನೆಗಳ ಮಹಾಪೂರವನ್ನೆ ಹರಿಸಿದ್ದಾರೆ.