ಬೆಳಗ್ಗೆವರೆಗೂ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದ ಅಶೋಕ್ ಮಧ್ಯಾಹ್ನದ ವೇಳೆಗೆ ಕಾಂಗ್ರೆಸ್‌ಗೆ ಸೇರ್ಪಡೆ!
ಹರಿಯಾಣ: ಹರಿಯಾಣ ವಿಧಾನಸಭೆ ಚುನಾವಣೆಯ ಪ್ರಚಾರಕ್ಕೆ ಇಂದು ಕೊನೆಯ ದಿನ. ಚುನಾವಣಾ ಪ್ರಚಾರದ ನಡುವೆಯೇ ಭಾರತೀಯ ಜನತಾ ಪಕ್ಷ (ಬಿಜೆಪಿ) ಭಾರಿ ಮುಖಭಂಗ ಅನುಭವಿಸಿದೆ. ಬೆಳಗ್ಗೆವರೆಗೂ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದ ಅಶೋಕ್ ತನ್ವಾರ್ ಮಧ್ಯಾಹ್ನದ ವೇಳೆಗೆ ಮತ್ತೊಮ್ಮೆ ಕಾಂಗ್ರೆಸ್‌ಗೆ ಸೇರ್ಪಡೆಯಾದರು.
ಮಹೇಂದ್ರಗಢದಲ್ಲಿ ಚುನಾವಣಾ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಮತ್ತು ಭೂಪೇಂದ್ರ ಸಿಂಗ್ ಹೂಡಾ ಅವರ ಸಮ್ಮುಖದಲ್ಲಿ ಅಶೋಕ್ ತನ್ವಾರ್ ಕಾಂಗ್ರೆಸ್‌ಗೆ ಮರುಸೇರ್ಪಡೆಯಾದರು.
ಹರಿಯಾಣ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ತನ್ವರ್ 2019ರಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಇದರ ನಂತರ, ಅವರು ನವೆಂಬರ್ 2021ರಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೆ ಸೇರಿದರು. ಬಳಿಕ 2022ರ ಏಪ್ರಿಲ್ ನಲ್ಲಿ ಆಮ್ ಆದ್ಮಿ ಪಕ್ಷವನ್ನು (ಎಎಪಿ) ಸೇರಿದ್ದರು. ಈ ವರ್ಷದ ಆರಂಭದಲ್ಲಿ, ಅವರು ಬಿಜೆಪಿಗೆ ಸೇರಿದ್ದು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಮತ್ತು ಆಡಳಿತದಲ್ಲಿ ದೇಶದಲ್ಲಿನ ಬದಲಾವಣೆಗಳನ್ನು ಶ್ಲಾಘಿಸಿದರು.
ಜಿಂದ್ ಜಿಲ್ಲೆಯ ಸಫಿಡಾನ್‌ನಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಕೆಲವೇ ಗಂಟೆಗಳಲ್ಲಿ ತನ್ವರ್ ಕಾಂಗ್ರೆಸ್ ಸೇರಿದರು. ರಾಹುಲ್ ಗಾಂಧಿ ತಮ್ಮ ಭಾಷಣದ ವೇಳೆ ವೇದಿಕೆಯಿಂದ ಘೋಷಣೆ ಮಾಡಲಾಯಿತು. ಸಭಿಕರನ್ನು ಕೆಲವು ನಿಮಿಷಗಳ ಕಾಲ ಕಾಯುವಂತೆ ಕೇಳಲಾಯಿತು. ಸ್ವಲ್ಪ ಸಮಯದ ನಂತರ ತನ್ವರ್ ವೇದಿಕೆಗೆ ಬಂದು ಇದು ನನ್ನ ಘರ್ ವಾಪ್ಸಿ ಎಂದು ಘೋಷಿಸಿದರು.