ಉಚ್ಚಿಲ ದಸರಾದ ಭವ್ಯ ಶೋಭಾಯಾತ್ರೆಗೆ ವಿದ್ಯುಕ್ತ ಚಾಲನೆ
ಉಚ್ಚಿಲ : ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುತ್ತಿರುವ 3ನೇ ವರ್ಷದ ಉಡುಪಿ ಉಚ್ಚಿಲ ದಸರಾ – 2024 ಭವ್ಯ ಶೋಭಾಯಾತ್ರೆಗೆ ವಿದ್ಯುಕ್ತ ಚಾಲನೆ ದೊರಕಿದೆ.
ನವದುರ್ಗೆಯರ ಸಹಿತ ಶಾರದಾ ಮೂರ್ತಿಗೆ ಮಹಾಪೂಜೆಯ ಬಳಿಕ ವಿಶೇಷವಾಗಿ ಡ್ರೋನ್ ಮೂಲಕ ಶ್ರೀ ಶಾರದಾದೇವಿ ಮತ್ತು ನವದುರ್ಗೆಯರ ವಿಗ್ರಹಗಳಿಗೆ ಪುಷ್ಪ ಸಿಂಚನಗೈಯ್ಯಲಾಯಿತು.
ಈ ವೇಳೆ ದೇವಳದ ರುವಾರಿ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಸಮಿತಿಯ ಗೌರವ ಸಲಹೆಗಾರ ನಾಡೋಜಾ ಡಾ. ಜಿ ಶಂಕರ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಅಧ್ಯಕ್ಷ ಜಯ ಸಿ ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮಹಾಜನ ಸಂಘದ ಉಪಾಧ್ಯಕ್ಷರಾದ ದಿನೇಶ್ ಎರ್ಮಾಳು, ಮೋಹನ್ ಬೇಂಗ್ರೆ, ಉದ್ಯಮಿ ಆನಂದ ಸಿ ಕುಂದರ್, ಪ್ರಧಾನ ಕಾರ್ಯದರ್ಶಿ ಶರಣ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್ ಸಹಿತ ಗಣ್ಯರು ಶ್ರೀ ಶಾರದಾದೇವಿ ಮತ್ತು ನವದುರ್ಗೆಯರ ವಿಗ್ರಹಗಳಿಗೆ ಪುಷ್ಪಾರ್ಚನೆ ಗೈದರು.
ಉಚ್ಚಿಲ ದೇವಳದಿಂದ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಎರ್ಮಾಳು ಮಸೀದಿವರೆಗೆ ಸಾಗಿ ಅಲ್ಲಿಂದ ಯೂ ಟರ್ನ್ ಪಡೆದು, ಉಚ್ಚಿಲ- ಮೂಳೂರು-ಕಾಪುವರೆಗೆ ಸಾಗಿ, ಕಾಪು ಕೊಪ್ಪಲಂಗಡಿ ಬಳಿ ಹೆದ್ದಾರಿಯ ಎಡ ಭಾಗದ ಬೀಚ್ ರಸ್ತೆಗೆ ತಿರುಗಿ ಅಲ್ಲಿಂದ ಕಾಪು ಬೀಚ್‌ವರೆಗೆ ಸಾಗಲಿದೆ.
ಶೋಭಾಯಾತ್ರೆಯಲ್ಲಿ ಮೈಸೂರು ದಸರಾ ಅಂಬಾರಿ ಪ್ರತಿಕೃತಿಯು ಮುಂಭಾಗದಲ್ಲಿ ಸಾಗಿ, ಶ್ರೀ ಶಾರದಾ ದೇವಿ ಹಾಗೂ ನವದುರ್ಗೆಯರ ಟ್ಯಾಬ್ಲೊಗಳೊಂದಿಗೆ ತುಳು ನಾಡಿನ ಸಂಸ್ಕೃತಿ ಬಿಂಬಿಸುವ, ಮೀನುಗಾರಿಕೆಯನ್ನು ಪ್ರತಿಬಿಂಬಿಸುವ ಹಾಗೂ ಮೊಗವೀರ ಸಮಾಜದ ಗುರುಗಳಾದ ಮಾಧವ ಮಂಗಳ ಗುರುಗಳು, ಸದಿಯ ಸಾಹುಕಾರರ ಸಹಿತ ವಿವಿಧ ಟ್ಯಾಬ್ಲೊಗಳು, ಕಲಾ ತಂಡ ಗಳು, ಭಜನಾ ತಂಡಗಳು, ಚೆಂಡೆ ವಾದ್ಯ, ಕೊಂಬು ಕಹಳೆ, ಡಿಜೆ ಸಂಗೀತ ಸಹಿತ ಸಹಸ್ರಾರು ಭಕ್ತಾದಿಗಳ ಜತೆಗೆ ಶೋಭಾಯಾತ್ರೆ ಸಾಗಿತು.
ಕಾಪು ಬೀಚ್ ಬಳಿ ಬೃಹತ್ ಗಂಗಾರತಿ, ಸುಮಂಗಲೆಯರಿಂದ ಮಹಾಮಂಗಳಾರತಿ, ಸುಡುಮದ್ದು ಪ್ರದರ್ಶನ, ಸಮುದ್ರ ಮಧ್ಯೆ 50ಕ್ಕೂ ಹೆಚ್ಚು ಬೋಟ್‌ಗಳಿಂದ ವಿದ್ಯುದ್ದೀಪಾಲಂಕಾರ, ಸುಡುಮದ್ದು ಪ್ರದರ್ಶನ, ಲೇಸರ್ ಲೈಟ್ ಪ್ರದರ್ಶನ ನಡೆಯಲಿದೆ. ಕಾಪು ಬೀಚ್ ಬಳಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಕಾಪು ಬೀಚ್ ಬಳಿ ಸಮುದ್ರದಲ್ಲಿ ಶಾರದೆ ಸಹಿತ ನವದುರ್ಗೆಯರ ವಿಗ್ರಹಗಳನ್ನು ಸಾಂಪ್ರದಾಯಿಕವಾಗಿ ಜಲಸ್ತಂಭನಗೊಳಿಸಲಾಗುವುದು.