
ಉಚ್ಚಿಲ ದಸರಾ: ಇಂದು ನಡೆಯಲಿದೆ ವೈಭವದ ಶೋಭಾಯಾತ್ರೆ; ಸೇರಲಿದೆ ಜನ ಸಾಗರ
ಪಡುಬಿದ್ರಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಶ್ರೀಕ್ಷೇತ್ರ ಉಚ್ಚಿಲ ಶ್ರೀಮಹಾಲಕ್ಷ್ಮಿ ದೇವಸ್ಥಾನದಲ್ಲಿ 3ನೇ ವರ್ಷದ ‘ಉಚ್ಚಿಲ ದಸರಾ' ವೈಭವಕ್ಕೆ ಇಂದು ಅಂತಿಮ ತೆರೆ ಬೀಳಲಿದೆ.
‘ಉಚ್ಚಿಲ ದಸರಾ' ವೈಭವದ ಶೋಭಾಯಾತ್ರೆಯು ಶ್ರೀಕ್ಷೇತ್ರದಿಂದ ಸಂಜೆ ಹೊರಟು ಎರ್ಮಾಳು ತನಕ ಸಾಗಿ, ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಉಚ್ಚಿಲ-ಮೂಳೂರು, ಕೊಪ್ಪಲಂಗಡಿಯವರೆಗೆ ಬಂದು, ಅಲ್ಲಿಂದ ಕಾಪು ಸಮುದ್ರ ತೀರದ ದೀಪಸ್ತಂಭದ ಬಳಿ ಈಗಾಗಲೇ ಪ್ರತಿಷ್ಠಾಪಿಸಲಾಗಿರುವ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹಗಳ ಜಲಸ್ತಂಭನ ಕಾರ್ಯ ನಡೆಯಲಿದೆ.
ಶೋಭಾಯಾತ್ರೆಯ ಅಂತಿಮ ಹಂತದ ಸಿದ್ಧತೆ ಮತ್ತು ಯಶಸ್ಸಿಗಾಗಿ ಪೊಲೀಸ್ ಇಲಾಖೆಯು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ, ಕ್ಷೇತ್ರಾಡಳಿತ ಸಮಿತಿ, ದಸರಾ ಉತ್ಸವ ಸಮಿತಿ, ಸ್ವಯಂ ಸೇವಕರ ಸಮಿತಿಗಳನ್ನೊಳಗೊಂಡು ವಿವಿಧ ಸಮಿತಿಗಳ ಜತೆಗೆ ಸಿದ್ಧತಾ ಸಭೆ ನಡೆಸಲಾಗಿದೆ.
ಉಚ್ಚಿಲ ದಸರಾ ಶೋಭಾಯಾತ್ರೆಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಶೋಭಾಯಾತ್ರೆಯ ಯಶಸ್ಸಿಗಾಗಿ ಸಾಗುವ ರಸ್ತೆ ಮತ್ತು ನಕ್ಷೆ ಸಮಿತಿ, ಸ್ವಯಂ ಸೇವಕರ ನಿರ್ವಹಣೆ ಸಮಿತಿ, ಟ್ಯಾಬ್ಲೊ ನಿರ್ವಹಣೆ ಸಮಿತಿ, ಪುರ ಶೃಂಗಾರ ಸಮಿತಿ, ಶೋಭಾಯಾತ್ರೆಯ ಜವಾಬ್ದಾರಿ ನಿರ್ವಹಣೆ ಮತ್ತು ವಿಗ್ರಹ ಜಲಸ್ತಂಭನ ಸಮಿತಿಗಳನ್ನು ರಚಿಸಲಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಶೋಭಾಯಾತ್ರೆ ನಡೆಸಬೇಕಿದ್ದು, ಅದಕ್ಕೆ ಪೂರಕವಾಗಿ ಪೊಲೀಸ್ ಇಲಾಖೆ ಕೈಗೆತ್ತಿಕೊಳ್ಳುವ ನಿರ್ಣಯಗಳಿಗೆ ದಸರಾ ಉತ್ಸವ ಸಮಿತಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಉಚ್ಚಿಲ ದಸರಾ ರೂವಾರಿ ಜಿ. ಶಂಕರ್ ಹೇಳಿದ್ದಾರೆ.
ಲಕ್ಷಾಂತರ ಜನ ಸೇರುವ ನಿರೀಕ್ಷೆ
ಈಗಾಗಲೇ ಲಕ್ಷಾಂತರ ಮಂದಿ ದೇಗುಲಕ್ಕೆ ಭೇಟಿ ನೀಡಿದ್ದು ಅ. 12ರಂದು 3 ಲಕ್ಷಕ್ಕೂ ಅಧಿಕ ಮಂದಿ ಕ್ಷೇತ್ರಕ್ಕೆ ಆಗಮಿಸುವ ನಿರೀಕ್ಷೆಯಿದೆ. ಶೋಭಾಯಾತ್ರೆಯಲ್ಲಿ ಒಂದು ಲಕ್ಷಕ್ಕೂ ಮಿಕ್ಕಿದ ಭಕ್ತರು ಹಾಗೂ ಜಲಸ್ತಂಭನದ ಸಂದರ್ಭ 30 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ.