
ಉತ್ತರ ಪ್ರದೇಶದಲ್ಲಿ ದಲಿತ ಶಿಕ್ಷಕ ಸೇರಿದಂತೆ ಕುಟುಂಬದ ನಾಲ್ವರ ಭೀಕರ ಹತ್ಯೆ ಪ್ರಕರಣ: ಆರೋಪಿ ಚಂದನ್ ವರ್ಮಾಗೆ ಗುಂಡೇಟು
ಲಕ್ನೋ: ಅಮೇಥಿಯಲ್ಲಿ ದಲಿತ ಶಿಕ್ಷಕ ಮತ್ತು ಆತನ ಕುಟುಂಬವನ್ನು ಹತ್ಯೆಗೈದ ಆರೋಪಿ ಚಂದನ್ ವರ್ಮಾ (26) ಕಾಲಿಗೆ ಶನಿವಾರ ಪೊಲೀಸರು ಗುಂಡೇಟು ಹೊಡೆದಿದ್ದಾರೆ.
ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ. ಅಪರಾಧಕ್ಕೆ ಬಳಸಿದ ಪಿಸ್ತೂಲ್ ವಶಪಡಿಸಿಕೊಳ್ಳಲು ಕರೆದೊಯ್ಯುತ್ತಿದ್ದಾಗ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಚಂದನ್ ಅಪಾಯದಿಂದ ಪಾರಾಗಿದ್ದು, ಸ್ಥಳೀಯ ಸಿಎಚ್‌ಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಅಮೇಥಿಯ ಹೆಚ್ಚುವರಿ ಎಸ್ಪಿ ಹರೇಂದ್ರ ಕುಮಾರ್ ತಿಳಿಸಿದ್ದಾರೆ.
ಕಾರ್ಯಾಚರಣೆ ವೇಳೆ ಚಂದನ್, ಸಬ್ ಇನ್ಸ್‌ಪೆಕ್ಟರ್ ಮದನ್ ಕುಮಾರ್ ಸಿಂಗ್ ಅವರಿಂದ ಪಿಸ್ತೂಲ್ ಕಿತ್ತುಕೊಂಡು ಗುಂಡು ಹಾರಿಸಿದ. ಪ್ರತಿಯಾಗಿ ಪೊಲೀಸರು ಆತ್ಮರಕ್ಷಣೆಗಾಗಿ ಚಂದನ್ ಬಲಗಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಅಮೇಥಿಯಲ್ಲಿ ಗುರುವಾರ ದಲಿತ ಶಾಲಾ ಶಿಕ್ಷಕ, ಆತನ ಪತ್ನಿ ಮತ್ತು ಇಬ್ಬರು ಪುತ್ರಿಯರ ಭೀಕರ ಹತ್ಯೆ ಮಾಡಿದ ಆರೋಪಿಯು ಶಿಕ್ಷಕನ ಪತ್ನಿಯನ್ನು ಪ್ರೀತಿಸುತ್ತಿದ್ದ. ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕನಾಗಿದ್ದ 34 ವರ್ಷದ ಸುನೀಲ್ ಕುಮಾರ್‌ಗೆ ತನ್ನ ಹೆಂಡತಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದಿತ್ತು. ನಂತರ ರಾಯ್ ಬರೇಲಿಯಲ್ಲಿ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಚಂದನ್ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಹೆಂಡತಿ ಎಫ್‌ಐಆರ್ ದಾಖಲಿಸುವಂತೆ ಮಾಡಿದ್ದರು. ತನ್ನ ಕುಟುಂಬದ ಸದಸ್ಯರಿಗೆ ಯಾರಿಗಾದರೂ ತೊಂದರೆಯಾದರೆ ಅದಕ್ಕೆ ಚಂದನ್ ಹೊಣೆಯಾಗಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಗುರುವಾರ, ಚಂದನ್ ಸಂತ್ರಸ್ತೆಯ ಮನೆಗೆ ನುಗ್ಗಿ ಸುನೀಲ್ ಮತ್ತು ಪೂನಂ ಮಾತ್ರವಲ್ಲದೆ ಅವರ ಪುತ್ರಿಯರಾದ 5 ವರ್ಷದ ಸೃಷ್ಟಿ, ಮತ್ತು ಒಂದೂವರೆ ವರ್ಷದ ಸಮೀಕ್ಷಾರನ್ನೂ ಹತ್ಯೆ ಮಾಡಿದ್ದಾನೆ. ಕೊಲೆ ಬಳಿಕ ಶುಕ್ರವಾರ ಸಂಜೆ ನೋಯ್ಡಾದಿಂದ ದೆಹಲಿಗೆ ತೆರಳಲು ಪ್ರಯತ್ನಿಸುತ್ತಿದ್ದಾಗ ಆರೋಪಿಯನ್ನು ಬಂಧಿಸಲಾಯಿತು.