ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಗುಡ್‌ನ್ಯೂಸ್; ಇದೇ 7 ಮತ್ತು 9ರಂದು ಜುಲೈ ಹಾಗೂ ಆಗಸ್ಟ್ ತಿಂಗಳ ಹಣ ಫಲಾನುಭವಿಗಳ ಖಾತೆಗೆ ಜಮಾ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಬೆಳಗಾವಿ: ತಾಂತ್ರಿಕ ಕಾರಣಗಳಿಂದ ವಿಳಂಬಗೊಂಡಿದ್ದ ಜುಲೈ ಹಾಗೂ ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಇದೇ 7 ಮತ್ತು 9 ರಂದು ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿಯಲ್ಲಿ ಗುರುವಾರ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ರಾಜ್ಯದ ಯಜಮಾನಿಯರ ಖಾತೆಗೆ ಎರಡೂ ಕಂತಿನ ಹಣವನ್ನು ಹಾಕಲಾಗುವುದು. ಕೆಲವೊಂದು ತಾಂತ್ರಿಕ ಕಾರಣಗಳಿಂದ ಹಣ ಹಾಕುವುದು ವಿಳಂಬವಾಗಿತ್ತು ಎಂದರು.
ಈ ಲಕ್ಷ್ಮೀ ಹೆಬ್ಬಾಳಕರ್ ಹಿಡಿದ ಕೆಲಸವನ್ನು ಮಾಡದೇ ಬಿಡುವುದಿಲ್ಲ ಎಂದು ಮೊನ್ನೆ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಸಮಾರಂಭದಲ್ಲಿ ಸ್ವತಃ ಮುಖ್ಯಮಂತ್ರಿಗಳೇ ನನ್ನ ಬಗ್ಗೆ ಹೇಳಿದ್ದಾರೆ. ಈ ಹೆಣ್ ಮಗಳು ತುಂಬಾ ಕಿಲಾಡಿ, ಹಠ ಮಾಡಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದೇ ಲಕ್ಷ್ಮೀ ಹೆಬ್ಬಾಳಕರ್ ಅಂತ ಸಿಎಂ ಸಿದ್ದರಾಮಯ್ಯ ನನ್ನ ಬಗ್ಗೆ ಹೇಳಿದ್ದಾರೆ. ಹೀಗಾಗಿ ಗೃಹಲಕ್ಷ್ಮಿ ಯೋಜನೆ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಪಟ್ಟು ಹಿಡಿದು ಯೋಜನೆ ಮಾಡಿಸಿದ್ದೇನೆ. ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುತ್ತಿದ್ದೇನೆ ಎಂದು ಸಚಿವರು ಹೇಳಿದರು.
ನವರಾತ್ರಿ ಹಬ್ಬದ ವೇಳೆ ಎರಡು ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ನಿಮಗೆಲ್ಲಾ (ಫಲಾನುಭವಿ ಮಹಿಳೆಯರು) ಬರುತ್ತಿದ್ದು, ಹಣ ಸಿಕ್ಕ ಬಳಿಕ ಭರ್ಜರಿಯಾಗಿ ಹೋಳಿಗೆ ಊಟ ಮಾಡಿ. ಅದೇ ನನಗೆ ಸಂತೋಷ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಸೇರಿದ್ದ ಮಹಿಳೆಯರು ಭಾರೀ ಕರತಾಡನ ಮಾಡಿದರು.
ಈ ಹಿಂದೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, " ನಮ್ಮ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿವೆ. ಗ್ಯಾರಂಟಿ ಯೋಜನೆಗಳಿಂದ ಹಿರಿಯ ನಾಗರಿಕರಿಗೆ ಬಹಳಷ್ಟು ಅನುಕೂಲವಾಗುತ್ತಿದೆ. ಶಕ್ತಿ ಯೋಜನೆಯಡಿ ನಮ್ಮ ಹಿರಿಯ ತಾಯಿಂದಿರರು ಕೂಡ ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾರೆ, ಇದು ಸಂತಸದ ಸಂಗತಿ ಆಗಿದೆ " ಎಂದಿದ್ದರು.
ರಾಜ್ಯದಲ್ಲಿ ಸದ್ಯ 57 ಲಕ್ಷದ 91 ಸಾವಿರ ಹಿರಿಯ ನಾಗರಿಕರಿದ್ದಾರೆ. ಇಲಾಖೆಗೆ 2024 -25ನೇ ಸಾಲಿನಲ್ಲಿ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿಗಾಗಿ ಸರ್ಕಾರ 10 ಕೋಟಿ 47 ಲಕ್ಷ ರೂಪಾಯಿ ಅನುದಾನ ನಿಗದಿಪಡಿಸಿದೆ. ಈ ಮೂಲಕ ಅನೇಕ ಜನಸ್ನೇಹಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಸಚಿವರು ಹೇಳಿದ್ದರು.