
ಬಿಜೆಪಿಯಲ್ಲಿ ವಂಶ ಪಾರಂಪರಿಕ ಆಡಳಿತ; ಬಸವರಾಜ್ ಬೊಮ್ಮಾಯಿ ವಿರುದ್ಧ ಆಕ್ರೋಶ ಹೊರಹಾಕಿದ ಮುತಾಲಿಕ್
ಹಾವೇರಿ: ರಾಜ್ಯದಲ್ಲಿ ಉಪಚುನಾವಣೆ ಘೋಷಣೆಯಾಗಿರುವ ಮೂರು ವಿಧಾನಸಭಾ ಕ್ಷೇತ್ರಗಳ ಪೈಕಿ ಶಿಗ್ಗಾವಿ-ಸವಣೂರು ಭಾರೀ ಸದ್ದು ಮಾಡುತ್ತಿದೆ. ಇನ್ನು ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಿಜೆಪಿಯಲ್ಲಿ ಬಂಡಾಯ ಶುರುವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಮಧ್ಯೆ ಬಿಜೆಪಿಯಲ್ಲಿ ವಂಶ ಪಾರಂಪರಿಕ ಆಡಳಿತ ನಿಲ್ಲಬೇಕು. ದೇಶ ಅದಫತಿಗೆ ಹೋಗುವ ಈ ಪದ್ಧತಿ ಇಲ್ಲಿಗೆ ಕೊನೆಯಾಗಬೇಕು ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಶಿಗ್ಗಾವಿ-ಸವಣೂರು ಬೈ ಎಲೆಕ್ಷನ್ ಸಂಬಂಧ ಮುತಾಲಿಕ್ ಹಾವೇರಿಯಲ್ಲಿ ಪ್ರತಿಕ್ರಿಯಿಸಿದ್ದು, ಬಿಜೆಪಿಯಲ್ಲಿ ವಂಶ ಪಾರಂಪರಿಕ ಆಡಳಿತ ಶುರುವಾಗಿದೆ. ನಾನು, ನನ್ನ ಮಗ ಹಾಗೂ ಮೊಮ್ಮಗನಿಗೆ ಎಂದು ರಾಜಕೀಯ ನಡೆಯುತ್ತಿದೆ. ಇದನ್ನು ಮೋದಿಯವರು ನಿಲ್ಲಿಸಬೇಕು ಎಂದಿದ್ದರು. ಆದರೂ ಮತ್ತೆ ಅದೆ ಮುಂದುವರೆಯುತ್ತಿದೆ. ಇದು ಕಾರ್ಯಕರ್ತರಿಗೆ,ಪಕ್ಷಕ್ಕೆ ಹಾಗೂ ಮೋದಿಯವರಿಗೆ ಮಾಡುತ್ತಿರುವ ದ್ರೋಹ ಎಂದು ನೇರವಾಗಿ ಬಸವರಾಜ್ ಬೊಮ್ಮಾಯಿಗೆ ಮುತಾಲಿಕ್ ತಿರುಗೇಟು ಕೊಟ್ಟಿದ್ದಾರೆ.
ಇಲ್ಲಿ ನಿಮ್ಮದೆ ಆಡಳಿತ ಎಂದು ಮಾಡೋದಾದರೆ ಕಾರ್ಯಕರ್ತರು ಏಕೆ ಬೇಕು? ಅವರ ಗತಿ ಏನು? ಇದನ್ನೆಲ್ಲ ಗಮನಿಸಿದರೆ ಬಿಜೆಪಿಗೂ ಕಾಂಗ್ರೇಸ್‌ಗೂ ಏನು ವ್ಯತ್ಯಾಸ ಇಲ್ಲಾ ಅನಿಸುತ್ತದೆ. ನೆನಪಿರಲಿ ಇದನ್ನು ವಿರೋಧಿಸುವ ಹಕ್ಕು ಕಾರ್ಯಕರ್ತರಿಗೆ ಇದೆ. ಇನ್ನು ಶಿಗ್ಗಾವಿ-ಸವಣೂರ ಲ್ಲಿ ಮುಸ್ಲಿಂರ ದರ್ಪ ನಡೆಯುತ್ತಿದೆ. ಎಲ್ಲಾ ದಂಧೆ ಹಾಗೂ ವ್ಯಾಪಾರದಲ್ಲಿ ಅವರೇ ಕೆಲಸ ಮಾಡುತ್ತಿದ್ದಾರೆ ಎಂದು ಮುತಾಲಿಕ್ ಗುಡುಗಿದರು.
ನಮ್ಮ ಕಾರ್ಯಕರ್ತರು ಬಸವರಾಜ್ ಬೊಮ್ಮಾಯಿಗೂ ಹಾಗೂ ಭರತ್ ಬೊಮ್ಮಾಯಿಗೆ ಮನವಿ ಕೊಡುತ್ತೇವೆ, ಅವುಗಳಿಗೆ ಸ್ಪಂದಿಸಿದರೆ ಮಾತ್ರ ನಾವು ಬಿಜೆಪಿಗೆ ಬೆಂಬಲ ನೀಡುತ್ತೇವೆ. ಅಕಸ್ಮಾತ್ ನಮ್ಮ ಮನವಿಗೆ ಸ್ಪಂಧಿಸದಿದ್ದರೆ ನೋಟಾ ಹಾಕುತ್ತೇವೆ. ಇಲ್ಲವಾದರೆ ಹಿಂದೂ ಕಾರ್ಯಕರ್ತನ ಚುನಾವಣೆಗೆ ನಿಲ್ಲಿಸುತ್ತೇವೆ ಎಂದು ಪ್ರಮೋದ್ ಮುತಾಲಿಕ್ ಕಿಡಿಕಾರಿದರು.
ಇನ್ನು ಬಂಕಾಪುರದಲ್ಲಿ ರಸ್ತೆ ಮದ್ಯೆ ಇರುವ ದರ್ಗಾ ತೆರವುಗೊಳಿಸಬೇಕು. ಇದೇ ನಮ್ಮ ಮೊದಲ ಪ್ರಮುಖ ಬೇಡಿಕೆ ಆಗಿದೆ. ಇದನ್ನು ನಿಮ್ಮಪ್ಪ ಮಾಡಲಿಲ್ಲ. ನೀನಾದರೂ ಮಾಡಬೇಕೆಂಬ ಬೇಡಿಕೆ ಇಡುತ್ತಿದ್ದೇನೆ. ಲವ್ ಜಿಹಾದ್ ಕೇಸ್ ಶಿಗ್ಗಾವಿಯಲ್ಲಿ ಹೆಚ್ಚಾಗಿವೆ. ಇದನ್ನು ನಿಲ್ಲಿಸಲೇಬೇಕು. ಹಾಗೂ ಕ್ಷೇತ್ರದಲ್ಲಿ ಗೋ ಹತ್ಯೆ ಪ್ರಕರಣ ಕೂಡ ಜಾಸ್ತಿಯಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲೇಬೇಕು. ಕ್ಷೇತ್ರದಲ್ಲಿನ ಹಾಗೂ ಜಿಲ್ಲೆಯ ಹಿಂದೂ ಕಾರ್ಯಕರ್ತರ ಮೇಲಿನ ಕೇಸ್ನ್ನು ತೆಗೆಸಬೇಕು. ನೆನಪಿರಲಿ ನಿಮ್ಮ ಹಾಗೇ ಏನೇನೋ ಮಾಡಿ ಕೇಸ್‌ನ್ನು ಕಾರ್ಯಕರ್ತರು ಹಾಕಿಸಿಕೊಂಡಿಲ್ಲ. ನಮ್ಮ ಹಿಂದೂ ಧರ್ಮ ರಕ್ಷಣೆಗಾಗಿ ಕೇಸ್ ಹಾಕಿಸಿಕೊಂಡಿದ್ದಾರೆ ಎಂದು ಭರತ್ ಬೊಮ್ಮಾಯಿಗೆ ನೇರವಾಗಿ ಹೇಳಿದರು.