ಬಾಬಾ ಸಿದ್ದಿಕಿ ಹತ್ಯೆ: ಶೂಟರ್‌ಗಳು ಗುಂಡು ಹಾರಿಸುವುದನ್ನು ಕಲಿತಿದ್ದು ಹೇಗೆ ಗೊತ್ತೇ ?
ಮುಂಬೈ: ಎನ್‌ಸಿಪಿ ನಾಯಕ, ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ದಿನದಿಂದ ದಿನಕ್ಕೆ ಹೊಸ ವಿಷಯಗಳು ಬಹಿರಂಗಗೊಳ್ಳುತ್ತಿವೆ. ಇನ್ನೂ ಈ ಹತ್ಯೆಯಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿಯೊಬ್ಬ ಮುಂಬೈ ಪೊಲೀಸರ ಕೈಗೆ ಇನ್ನೂ ಸಿಕ್ಕಿಲ್ಲ. ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆಯಲ್ಲಿ ಭಾಗಿಯಾಗಿರುವ ಶೂಟರ್‌ಗಳು ಮುಂಬೈನ ಕುರ್ಲಾ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ಯೂಟ್ಯೂಬ್‌ನಲ್ಲಿ ವೀಡಿಯೊಗಳನ್ನು ನೋಡುವ ಮೂಲಕ ಗುಂಡು ಹಾರಿಸುವುದನ್ನು ಕಲಿತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ಟೋಬರ್ 12ರ ರಾತ್ರಿ 8.30ರ ಸುಮಾರಿಗೆ ನಿರ್ಮಲ್ ನಗರ ಪ್ರದೇಶದಲ್ಲಿನ ಬಾಬಾ ಸಿದ್ದಿಕಿ ಪುತ್ರ, ಶಾಸಕ ಜೀಶಾನ್ ಸಿದ್ದಿಕಿ ಅವರ ಕಚೇರಿಯ ಹೊರಗೆ ಬಾಬಾ ಸಿದ್ದಿಕಿ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಪೊಲೀಸರ ಪ್ರಕಾರ, ಈ ಘಟನೆಯಲ್ಲಿ ಮೂವರು ಶೂಟರ್‌ಗಳು ಅವರನ್ನು ಹತ್ಯೆ ಮಾಡಿದ್ದಾರೆ. ಆದಾಗ್ಯೂ, ಮುಂಬೈ ಪೊಲೀಸರು ಈ ಪ್ರಕರಣದಲ್ಲಿ ಹರ್ಯಾಣದ ನಿವಾಸಿ ಗುರ್ಮೆಲ್ ಬಲ್ಜಿತ್ ಸಿಂಗ್, ಉತ್ತರ ಪ್ರದೇಶದ ಧರ್ಮರಾಜ್ ರಾಜೇಶ್ ಕಶ್ಯಪ್, ಇಬ್ಬರೂ ಶೂಟರ್‌ಗಳಾದ ಹರೀಶ್‌ಕುಮಾರ್ ಬಲ್ಕ್ರಾಮ್ ನಿಶಾದ್ ಮತ್ತು ಪುಣೆ ನಿವಾಸಿ ಪ್ರವೀಣ್ ಲೋಂಕರ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
ಮಾಹಿತಿ ಪ್ರಕಾರ, ತಲೆಮರೆಸಿಕೊಂಡಿರುವ ಆರೋಪಿ ಶಿವಕುಮಾರ್ ಗೌತಮ್ ಸಹ ಉತ್ತರಪ್ರದೇಶದ ನಿವಾಸಿಯಾಗಿದ್ದು, ಬಂಧಿತ ಆರೋಪಿಗಳ ವಿಚಾರಣೆ ವೇಳೆ ಶಿವಕುಮಾರ್ ಗೌತಮ್ ಉತ್ತರ ಪ್ರದೇಶದಲ್ಲಿ ಮದುವೆ ಸಮಾರಂಭಗಳ ಸಂಭ್ರಮಾಚರಣೆ ವೇಳೆ ಗನ್ ಬಳಸಲು ಕಲಿತಿರುವುದು ಬೆಳಕಿಗೆ ಬಂದಿದೆ ಎಂದು ಅಪರಾಧ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುರ್ಮೈಲ್ ಸಿಂಗ್ ಮತ್ತು ಧರ್ಮರಾಜ್ ಕಶ್ಯಪ್ ಅವರ ವಿಚಾರಣೆಯನ್ನು ಉಲ್ಲೇಖಿಸಿದ ಅಧಿಕಾರಿ, ಶಿವಕುಮಾರ್ ಗೌತಮ್ ಅವರನ್ನು ಈ ಘಟನೆಯಲ್ಲಿ 'ಮುಖ್ಯ ಶೂಟರ್' ಎಂಬುದು ತಿಳಿದುಬಂದಿದೆ ಎಂದು ಹೇಳಿದರು.
ಶಿವಕುಮಾರ್ ಗೌತಮ್ ಅವರು ಧರ್ಮರಾಜ್ ಕಶ್ಯಪ್ ಮತ್ತು ಗುರ್ಮೈಲ್ ಸಿಂಗ್ ಅವರಿಗೆ ಕುರ್ಲಾದಲ್ಲಿ ಬಾಡಿಗೆ ಮನೆಯಲ್ಲಿ ಶಸ್ತ್ರಾಸ್ತ್ರಗಳನ್ನು ಬಳಸುವ ತರಬೇತಿಯನ್ನು ನೀಡಿದ್ದನು. ಅವರು ಮುಕ್ತ ಸ್ಥಳದ ಕೊರತೆಯಿಂದ ಗುಂಡುಗಳಿಲ್ಲದೆ ಗುಂಡು ಹಾರಿಸುವುದನ್ನು ಅಭ್ಯಾಸ ಮಾಡಿದ್ದರು. ಸುಮಾರು ನಾಲ್ಕು ವಾರಗಳ ಕಾಲ ಯೂಟ್ಯೂಬ್ ವೀಡಿಯೋಗಳನ್ನು ನೋಡುವ ಮೂಲಕ ಆಯುಧವನ್ನು ಲೋಡ್ ಮಾಡುವುದು ಗುಂಡು ಹಾರಿಸುವುದು ಕಲಿತರು ಎಂದು ಅಧಿಕಾರಿ ಹೇಳಿದರು. ಈ ಬಗ್ಗೆ ಆಘಾತಕಾರಿ ಸಂಗತಿಯೆಂದರೆ, ನಟ ಸಲ್ಮಾನ್ ಖಾನ್ ಅವರ ಬಾಂದ್ರಾ ಮನೆಯ ಹೊರಗೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಆರೋಪಿಗಳ ಸಹ ಸಂಚುಕೋರರಲ್ಲಿ ಒಬ್ಬರಾದ ಶುಭಂ ಲೋಂಕರ್ ಅವರನ್ನು ಪೊಲೀಸರು ಜೂನ್‌ನಲ್ಲಿ ವಿಚಾರಣೆಗೆ ಒಳಪಡಿಸಿದ್ದರು. ಇಡೀ ಘಟನೆಯು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಜಾಲದೊಂದಿಗೆ ನಂಟು ಹೊಂದಿದೆ ಎಂದು ಹೇಳಲಾಗಿದೆ. ಶುಭಂ ಪ್ರವೀಣ್ ಲೋಂಕರ್ ಅವರ ಸಹೋದರ ಮತ್ತು ಪುಣೆಯಲ್ಲಿ ಡೈರಿ ನಡೆಸುತ್ತಿದ್ದಾರೆ.