ಸಂಭ್ರಮದ ‘ಉಡುಪಿ ಉಚ್ಚಿಲ ದಸರಾ’ಕ್ಕೆ ಕ್ಷಣಗಣನೆ; ಮಧುವಣಗಿತ್ತಿಯಂತೆ ಶೃಂಗಾರಗೊಂಡ ಉಚ್ಚಿಲ

ಸಂಭ್ರಮದ ‘ಉಡುಪಿ ಉಚ್ಚಿಲ ದಸರಾ’ಕ್ಕೆ ಕ್ಷಣಗಣನೆ; ಮಧುವಣಗಿತ್ತಿಯಂತೆ ಶೃಂಗಾರಗೊಂಡ ಉಚ್ಚಿಲ

ಉಚ್ಚಿಲ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಅಡಳಿತದ ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಳದಲ್ಲಿ ನವರಾತ್ರಿ ಉತ್ಸವವದ ಪ್ರಯುಕ್ತ ಅ. 3ರಿಂದ 12ರವರೆಗೆ ನಡೆಯಲಿರುವ 3ನೇ ವರ್ಷದ ‘ಉಡುಪಿ ಉಚ್ಚಿಲ ದಸರಾ’ಕ್ಕೆ ಭರದ ಸಿದ್ಧತೆ ಕೈಗೊಳ್ಳಲಾಗಿದ್ದು, ಕ್ಷಣಗಣನೆ ಆರಂಭವಾಗಿದೆ.

ಶಿಸ್ತುಬದ್ಧವಾಗಿ, ಸಂಪ್ರದಾಯಿಕವಾಗಿ ಹಾಗು ವಿಭಿನ್ನವಾದ ಸಾಂಸ್ಕೃತಿಕ ವೈಭವದೊಂದಿಗೆ  ‘ಉಡುಪಿ ಉಚ್ಚಿಲ ದಸರಾ’ವನ್ನು ಆಚರಿಸಲು ದಸರಾ ರೂವಾರಿ, ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಜಿ. ಶಂಕರ್ ನೇತೃತ್ವದಲ್ಲಿ ಅಂತಿಮ ತಯಾರಿ ನಡೆಸಲಾಗಿದೆ.

ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚು ಜನ ಸೇರುವ ನಿರೀಕ್ಷೆಯಿದ್ದು, ಈ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಸಕಲ ಸಿದ್ಧತೆಗಳನ್ನು ಈಗಾಗಲೇ ಸಂಘಟಕರು ಕೈಗೊಂಡಿದ್ದು, ಇಡೀ ಉಚ್ಚಿಲ ಪೇಟೆಯನ್ನು ವರ್ಣಮಯ ವಿದ್ಯುತ್ ದೀಪಗಳಿಂದ ಮಧುವಣಗಿತ್ತಿಯಂತೆ ಸಿಂಗರಿಸಲಾಗಿದೆ. 

ದ.ಕ. ಮೊಗವೀರ ಮಹಾಜನ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಉಚ್ಚಿಲ ದಸರಾ ಉತ್ಸವವು ಮೈಸೂರು, ಮಡಿಕೇರಿ, ಮಂಗಳೂರು, ಶಿವಮೊಗ್ಗ ದಸರಾ ವೈಭವದ ಮಾದರಿಯಲ್ಲೇ ಅಚ್ಚುಕಟ್ಟಾಗಿ ನಡೆಯುತ್ತಿದ್ದು, ಹೊಸ ದಾಖಲೆ ಬರೆಯವತ್ತ ಹೆಜ್ಜೆಯನ್ನಿಡುತ್ತಿದೆ. 

ಇದಕ್ಕಾಗಿ ಉಚ್ಚಿಲ ದಸರಾ ರೂವಾರಿ ಡಾ| ಜಿ. ಶಂಕರ್‌, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ ಮಲ್ಪೆ, ಪ್ರಮುಖರಾದ ಶರಣ್ ಕುಮಾರ್ ಮಟ್ಟು, ಮೋಹನ್ ಬಂಗೇರ, ದಿವಾಕರ ಕರ್ಕೇರ, ಗಿರಿಧರ್ ಸುವರ್ಣ, ರತ್ನಾಕರ ಸುವರ್ಣ, ಸುಜಿತ್ ಸಾಲ್ಯಾನ್, ಸತೀಶ್ ಅಮೀನ್ ಪಡುಕೆರೆ, ಉಚ್ಚಿಲ ದಸರಾ ಸಮಿತಿಯ ಪದಾಧಿಕಾರಿಗಳು ಶ್ರಮಿಸುತ್ತಿದ್ದಾರೆ.

ಪಡುಬಿದ್ರಿಯಿಂದ ಕಾಪು ಸಮುದ್ರ ತೀರದ ದೀಪ ಸ್ತಂಭದವರೆಗೆ ಎಂಆರ್‌ಜಿ ಗ್ರೂಪ್‌ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಪ್ರಾಯೋಜಕತ್ವದ ವಿದ್ಯುದ್ದೀಪಾಲಂಕಾರ ಜಗಮಗಿಸುತ್ತಿದ್ದು, ನವ ದುರ್ಗೆಯರ, ಶಾರದಾ ಮಾತೆ ವಿಗ್ರಹಗಳನ್ನು ಕ್ಷೇತ್ರದ ತಂತ್ರಿ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ, ಪ್ರಧಾನ ಪುರೋಹಿತ ರಾಘವೇಂದ್ರ ಉಪಾಧ್ಯಾಯ ನೇತೃತ್ವದಲ್ಲಿ 3ರಂದು ಪ್ರತಿಷ್ಠಾಪಿಸಲಾಗುವುದು. 

ಅ.3ರಂದು ಬೆಳಿಗ್ಗೆ 10ಕ್ಕೆ ‘ಉಡುಪಿ ಉಚ್ಚಿಲ ದಸರಾ– 2024’ ಉದ್ಘಾಟನೆಗೊಳ್ಳಲಿದೆ. 10.30ಕ್ಕೆ ದಸರಾ ಮಹೋತ್ಸವ ಪ್ರಯುಕ್ತ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನ, ಗುಡಿ ಕೈಗಾರಿಕಾ ಪ್ರಾತ್ಯಕ್ಷಿಕೆ, ಸಮುದ್ರದ ಜೀವಂತ ಮೀನುಗಳ ಪ್ರದರ್ಶನ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಲಭ್ಯವಿರುವ ಮೀನುಗಾರಿಕೆ ಯೋಜನೆಗಳ ಮಾಹಿತಿ, ಮೀನುಗಾರಿಕಾ ಪರಿಕರಗಳ ಪ್ರದರ್ಶನ ಸೇರಿದಂತೆ ವಿವಿಧ ಪ್ರದರ್ಶನಗಳಿಗೆ ಚಾಲನೆ ನೀಡಲಾಗುವುದು. ದ.ಕ. ಮೊಗವೀರ ಮಹಾಜನ ಸಂಘದ 100ನೇ ವರ್ಷದ ಸವಿನೆನಪಿಗೆ ನವೀಕರಿಸಲ್ಪಟ್ಟ ನೂತನ ಆಡಳಿತ ಕಚೇರಿ ಉದ್ಘಾಟಿಸಲಾಗುವುದು. ಸಂಜೆ 5ಕ್ಕೆ ದಸರಾ ಉತ್ಸವದ ಪ್ರಯುಕ್ತ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಭಜನಾ ಕಾರ್ಯಕ್ರಮ, ಧಾರ್ಮಿಕ ಸಭಾ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ.

Ads on article

Advertise in articles 1

advertising articles 2

Advertise under the article