ಕೆನಡಾದಲ್ಲಿ ಖಲಿಸ್ತಾನಿಗಳಿಂದ ಹಿಂದೂಗಳ ಮೇಲೆ  ದಾಳಿ; ವಿಡಿಯೋ ವೈರಲ್

ಕೆನಡಾದಲ್ಲಿ ಖಲಿಸ್ತಾನಿಗಳಿಂದ ಹಿಂದೂಗಳ ಮೇಲೆ ದಾಳಿ; ವಿಡಿಯೋ ವೈರಲ್

ಟೊರಾಂಟೊ: ಕೆನಡಾದಲ್ಲಿ ಹಿಂದೂಗಳ ಮೇಲಿನ ಖಲಿಸ್ತಾನಿಗಳ ಕ್ರೌರ್ಯ ಮುಂದುವರೆದಿದ್ದು, ಬ್ರಾಂಪ್ಟನ್‌ನಲ್ಲಿರುವ ದೇವಸ್ಥಾನ ಹಾಗೂ ಅಲ್ಲಿದ್ದ ಭಕ್ತರ ಮೇಲೆ ದಾಳಿ ನಡೆಸಿದ್ದಾರೆ.

ಖಲಿಸ್ತಾನಿಗಳ ಈ ದುಷ್ಕೃತ್ಯದ ವಿಡಿಯೋ ವೈರಲ್ ಆಗಿದ್ದು, ಇದನ್ನು ಜಸ್ಟಿನ್ ಟ್ರುಡೊ ಖಂಡಿಸಿದ್ದಾರೆ. ಈ ಘಟನೆಗೆ ಭಾರತ ಕಟುವಾಗಿ ಪ್ರತಿಕ್ರಿಯೆ ನೀಡಿದೆ.

ಖಲಿಸ್ತಾನಿಗಳು ಹಿಂದೂ ದೇವಾಲಯ ಹಾಗೂ ಹಿಂದೂಗಳ ಮೇಲೆ ನಡೆಸುತ್ತಿರುವ ಕ್ರೌರ್ಯದ ವಿಡಿಯೋವನ್ನು ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಈ ವಿಡಿಯೋ ವೈರಲ್ ಆಗಿದೆ.

https://twitter.com/i/status/1853159545016659994

ಇಂದು ಕೆನಡಿಯನ್ ಖಲಿಸ್ತಾನಿಗಳು ತಮ್ಮ ಎಲ್ಲೆ ಮೀರಿದ್ದಾರೆ. ಬ್ರಾಂಪ್ಟನ್‌ನಲ್ಲಿನ ಹಿಂದೂ ಸಭಾ ದೇವಸ್ಥಾನದ ಆವರಣದ ಒಳಗೆ ಹಿಂದೂ ಕೆನಡಿಯನ್ ಭಕ್ತರ ಮೇಲಿನ ಖಲಿಸ್ತಾನಿಗಳ ದಾಳಿಯು ಕೆನಡಾದಲ್ಲಿ ಖಲಿಸ್ತಾನಿ ಹಿಂಸಾ ಉಗ್ರವಾದವು ಎಷ್ಟು ಆಳವಾಗಿದೆ ಹಾಗೂ ಮಿತಿಮೀರಿದೆ ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಖಲಿಸ್ತಾನ ಉಗ್ರರು ಕೆನಡಾದಲ್ಲಿ ಫ್ರೀ ಪಾಸ್ ಪಡೆದುಕೊಳ್ಳುತ್ತಿರುವುದರಲ್ಲಿ ಯಾವ ಅಚ್ಚರಿಯೂ ಇಲ್ಲ. ನಾನು ಬಹಳ ಹಿಂದಿನಿಂದಲೂ ಹೇಳುತ್ತಿರುವಂತೆ, ಹಿಂದೂ ಕೆನಡಿಯನ್ನರು ನಮ್ಮ ಸಮುದಾಯದ ಭದ್ರತೆ ಹಾಗೂ ಸುರಕ್ಷತೆಗಾಗಿ ಎದ್ದು ನಿಲ್ಲುವ ಹಾಗೂ ತಮ್ಮ ಹಕ್ಕುಗಳನ್ನು ಪ್ರತಿಪಾದಿಸುವ ಅಗತ್ಯವಿದ್ದು, ಇದಕ್ಕೆ ರಾಜಕಾರಣಿಗಳನ್ನು ಹೊಣೆಗಾರರನ್ನಾಗಿಸಬೇಕು ಎಂದು ಕಿಡಿಕಾರಿದ್ದಾರೆ.

ಘಟನೆಗೆ ಕನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ಅವರು ಖಂಡನೆ ವ್ಯಕ್ತಪಡಿಸಿದ್ದಾರೆ. ಬ್ರಾಂಪ್ಟನ್‌ನ ಹಿಂದೂ ಸಭಾ ಮಂದಿರದಲ್ಲಿ ನಡೆದ ಹಿಂಸಾಚಾರ ಕೃತ್ಯವನ್ನು ಒಪ್ಪಲಾಗದು. ಕೆನಡಾದ ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನು ಮುಕ್ತಾಗಿ ಮತ್ತು ಸುರಕ್ಷಿತವಾಗಿ ಆಚರಿಸುವ ಹಕ್ಕು ಇದೆ' ಎಂದು ಹೇಳಿದ್ದಾರೆ. ಹಾಗೆಯೇ, ಸಮುದಾಯದ ರಕ್ಷಣೆ ಹಾಗೂ ಪ್ರಕರಣದ ತನಿಖೆ ನಿಟ್ಟಿನಲ್ಲಿ ತ್ವರಿತವಾಗಿ ಪ್ರತಿಕ್ರಿಯಿಸಿದ ಪೊಲೀಸರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಘಟನೆಗೆ ಭಾರತ ತೀವ್ರ ಖಂಡನೆ ಹಾಗೂ ಕಳವಳ ವ್ಯಕ್ತಪಡಿಸಲಿದೆ. ಹಿಂದಿನ ವರ್ಷಗಳಂತೆ ಒಟ್ಟಾವದಲ್ಲಿನ ಭಾರತೀಯ ಹೈ ಕಮಿಷನ್ ಮತ್ತು ವ್ಯಾಂಕೋವರ್ ಮತ್ತು ಟೊರಾಂಟೊದಲ್ಲಿನ ಕಾನ್ಸುಲೇಟ್ ಜನರಲ್, ಕೆನಡಿಯನ್ನರು ಮತ್ತು ಭಾರತೀಯರ ಸ್ಥಳೀಯ ಜೀವನ ಮಟ್ಟದ ಅನುಕೂಲತೆಗಾಗಿ ಕಾನ್ಸುಲರ್ ಕ್ಯಾಂಪ್‌ಗಳನ್ನು ಆಯೋಜಿಸಿತ್ತು. ಕೆನಡಾದಲ್ಲಿನ ಪ್ರತಿಕೂಲ ಭದ್ರತಾ ಪರಿಸ್ಥಿತಿ ಕಾರಣದಿಂದ ದೈನಂದಿನ ಕಾನ್ಸುಲರ್ ಕೆಲಸಗಳಲ್ಲಿ ಇರುವಂತೆ ಈ ಕಾರ್ಯಕ್ರಮಗಳಿಗೆ ಹೆಚ್ಚಿನ ಭದ್ರತಾ ಕ್ರಮಗಳನ್ನು ಒದಗಿಸುವಂತೆ ಕೆನಡಾ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಟೊರಾಂಟೊ ಸಮೀಪದ ಬ್ರಾಂಪ್ಟನ್‌ನ ಹಿಂದೂ ಸಭಾ ಮಂದಿರದ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಕಾನ್ಸುಲರ್ ಶಿಬಿರದ ಹೊರಗೆ ಭಾರತ ವಿರೋಧಿ ಶಕ್ತಿಗಳು ನಡೆಸಿದ ಹಿಂಸಾತ್ಮಕ ಗದ್ದಲವನ್ನು ನಾವು ನೋಡಿದ್ದೇವೆ. ಸ್ಥಳೀಯ ಸಹ- ಸಂಘಟಕರ ಸಂಪೂರ್ಣ ಸಹಕಾರದೊಂದಿಗೆ ನಮ್ಮ ಕಾನ್ಸುಲೇಟ್‌ಗಳು ಆಯೋಜಿಸಿದ್ದ ದೈನಂದಿನ ಕಾನ್ಸುಲರ್ ಕೆಲಸದ ವೇಳೆ ಇಂತಹ ಅಡಚಣೆಗಳಿಗೆ ಅವಕಾಶ ನೀಡುತ್ತಿರುವುದು ಬಹಳ ನಿರಾಶಾದಾಯಕ ಎಂದು ಭಾರತೀಯ ರಾಯಭಾರ ಕಚೇರಿ ಪ್ರತಿಕ್ರಿಯೆ ನೀಡಿದೆ.

ಭಾರತ ಹಾಗೂ ಕೆನಡಾ ನಡುವಣ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿರುವ ನಡುವಲ್ಲೇ ದೇವಾಲಯ ಹಾಗೂ ಹಿಂದೂಗಳ ಮೇಲೆ ಈ ದಾಳಿ ನಡೆದಿದೆ.

2023ರ ಜೂನ್‌ನಲ್ಲಿ ಕೆನಡಾದಲ್ಲಿ ನಡೆದಿರುವ ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟರ ಪಾತ್ರದ ಬಗ್ಗೆ ವಿಶ್ವಾಸಾರ್ಹ ಪುರಾವೆಗಳಿವೆ ಎಂದು ಪ್ರಧಾನಿ ಟ್ರುಡೊ ವರ್ಷದ ಹಿಂದೆ ಹೇಳಿದ್ದರು. ಈ ನಡುವಲ್ಲೇ ಸಿಖ್‌ ಪ್ರತ್ಯೇಕತಾವಾದಿಗಳ ಹತ್ಯೆ ಸಂಚಿನಲ್ಲಿ ಅಮಿತ್‌ ಶಾ ಅವರ ಕೈವಾಡವಿದೆ ಎಂದು ಕೆನಡಾದ ವಿದೇಶಾಂಗ ವ್ಯವಹಾರಗಳ ಉಪ ಸಚಿವ ಡೇವಿಡ್‌ ಮಾರಿಸನ್‌ ಇತ್ತೀಚೆಗೆ ಆರೋಪಿಸಿದ್ದಾರೆ.

ಈ ಆರೋಪದ ಬೆನ್ನಲ್ಲೇ ರಾಜತಾಂತ್ರಿಕ ಸಂಬಂಧ ಜಟಿಲಗೊಂಡಿರುವುದರ ನಡುವೆ, ಕೆನಡಾ ಸರ್ಕಾರವು ಸೈಬರ್ ಬೆದರಿಕೆಯೊಡ್ಡುವ ವಿರೋಧಿ ರಾಷ್ಟ್ರಗಳ ಪಟ್ಟಿಗೆ ಭಾರತವನ್ನು ಕಳೆದ ವಾರ ಸೇರಿಸಿದೆ. ಇದರಿಂದಾಗಿ ಉಭಯ ರಾಷ್ಟ್ರಗಳ ನಡುವಿನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

Ads on article

Advertise in articles 1

advertising articles 2

Advertise under the article