ಚನ್ನಪಟ್ಟಣದಲ್ಲಿ ಯೋಗೇಶ್ವರ್ 'ಕೈ' ಹಿಡಿದ ಮತದಾರ; 3ನೇ ಯತ್ನದಲ್ಲೂ ನಿಖಿಲ್​ಗೆ ಸೋಲು

ಚನ್ನಪಟ್ಟಣದಲ್ಲಿ ಯೋಗೇಶ್ವರ್ 'ಕೈ' ಹಿಡಿದ ಮತದಾರ; 3ನೇ ಯತ್ನದಲ್ಲೂ ನಿಖಿಲ್​ಗೆ ಸೋಲು

ಚನ್ನಪಟ್ಟಣ: ಕರ್ನಾಟಕದ ಮೂರು ವಿಧಾನಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಚನ್ನಪಟ್ಟಣದಲ್ಲಿ ಎನ್​ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೆಡಿಎಸ್​ನ ನಿಖಿಲ್ ಕುಮಾರಸ್ವಾಮಿ ಅವರನ್ನು ಮಣಿಸಿ ಕಾಂಗ್ರೆಸ್​ನ ಸಿಪಿ ಯೋಗೇಶ್ವರ್ ಗೆಲುವು ದಾಖಲಿಸಿದ್ದಾರೆ. ಅದರೊಂದಿಗೆ, ಕೊನೇ ಕ್ಷಣದಲ್ಲಿ ಬಿಜೆಪಿಯಿಂದ ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾಗಿ ಸ್ಪರ್ಧಿಸಿದ್ದ ಯೋಗೇಶ್ವರ್​​ ಅವರನ್ನು ಮತದಾರರು ‘ಕೈ’ ಹಿಡಿದಿದ್ದಾರೆ. ಅತ್ತ ನಿಖಿಲ್​ಗೆ ಮೂರನೇ ಬಾರಿಯೂ ಮುಖಭಂಗವಾಗಿದೆ. ಈ ಹಿಂದೆ ಮಂಡ್ಯದಿಂದ ಲೋಕಸಭೆ ಚುನಾವಣೆ, ರಾಮನಗರದಿಂದ ವಿಧಾನಸಭೆ ಚುನಾವಣೆ ಸ್ಪರ್ಧಿಸಿ ಸೋಲುಂಡಿದ್ದ ಅವರು, ಇದೀಗ ಮೂರನೇ ಪ್ರಯತ್ನದಲ್ಲಿಯೂ ವಿಫಲರಾಗಿದ್ದಾರೆ.

ಚನ್ನಪಟ್ಟಣದಲ್ಲಿ ಎರಡು ಬಾರಿ ಸೋತಿರುವ ಅನುಕಂಪ ಯೋಗೇಶ್ವರ್​ ಕೈ ಹಿಡಿದಿರಬಹುದು. ಇಷ್ಟೇ ಅಲ್ಲದೆ ಕ್ಷೇತ್ರದಲ್ಲಿ ಯೋಗೇಶ್ವರ್ ಅವರಿಗೆ ಅವರದ್ದೇ ಆದ ವೈಯಕ್ತಿಕ ವರ್ಚಸ್ಸು ಇದೆ. ಯೋಗೇಶ್ವರ್ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿರುವುದರಿಂದ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಪ್ಲಸ್ ಆಗುರಬಹುದು. ಜೊತೆ ಡಿಕೆ ಸಹೋದರರು ಯೋಗೇಶ್ವರ್​ ಬೆನ್ನಿಗೆ ನಿಂತಿರುವುದು ಕೂಡ ನೆರವಾಗಿದೆ. ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಒಗ್ಗಟ್ಟು ಪ್ರದರ್ಶನ ಸೇರಿ ಹಲವು ವಿಚಾರಗಳು ಸಿಪಿವೈಗೆ ವರವಾಗಿ ಪರಿಣಮಿಸಿದವು.

ರಾಜ್ಯದ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆದರೂ, ಚನ್ನಪಟ್ಟಣದಲ್ಲಿ ಈ ಬಾರಿ ಜಿದ್ದಾಜಿದ್ದಿ ಜೋರಾಗಿತ್ತು. 2018ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಸೋಲು. 2023ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ರಾಮನಗರದಲ್ಲಿ ಸೋಲು. ಹೀಗೆ ಎರಡು ಸೋಲು ಕಂಡಿದ್ದ ಜೆಡಿಎಸ್​ನ ನಿಖಿಲ್ ಕುಮಾರಸ್ವಾಮಿ ಈಬಾರಿ ಚನ್ನಪಟ್ಟಣದಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಅತ್ತ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವ ಸಿಪಿ ಯೋಗೇಶ್ವರ್​ಗೆ ಕೂಡಾ ಈ ಚುನಾವಣೆ ಅಗ್ನಿ ಪರೀಕ್ಷೆಯಾಗಿತ್ತು. ನಿಖಿಲ್, ಯೋಗೇಶ್ವರ್ ಅಭ್ಯರ್ಥಿಯಾದರೂ, ಇದು ಹೆಚ್​ಡಿ ಕುಮಾರಸ್ವಾಮಿ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಯುದ್ಧವೇ ಆಗಿತ್ತು.

ನಿಖಿಲ್​ಗೆ ಮೈನಸ್ ಆಗಿರುವ ಮೊದಲನೇ ಪಾಯಿಂಟ್ ಅಂದರೆ ಕುಟುಂಬ ರಾಜಕಾರಣ ಮತ್ತು ಕೊನೇ ಕ್ಷಣದಲ್ಲಿ ಸ್ಪರ್ಧೆ ಮಾಡಿರುವುದು. ಅಲ್ಲದೆ, ಕುಮಾರಸ್ವಾಮಿ ಚನ್ನಪಟ್ಟಣದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮಂಡ್ಯ ಸಂಸದ ಸ್ಥಾನಕ್ಕೆ ಹೋಗಿರುವ ಅಂಶ ಕೂಡಾ ಮುಖ್ಯವಾಯಿತು. ಇನ್ನು ಯೋಗೇಶ್ವರ್​ಗೆ ಟಿಕೆಟ್ ಕೊಡಲಿಲ್ಲ ಎಂಬ ಅನುಕಂಪ ನಿಖಿಲ್​ಗೆ​ ಮೈನಸ್ ಆಯಿತು ಎಂದೂ ಹೇಳಲಾಗುತ್ತಿದೆ. ಜೊತೆಗೆ ತಳ ಮಟ್ಟದಲ್ಲಿ ಬಿಜೆಪಿಯಿಂದ ಅಷ್ಟಾಗಿ ಸಹಕಾರ ಸಿಗದೇ ಹೋಗಿರುವ ಸಾಧ್ಯತೆಯೂ ಇಇದೆ. ಅಂತಿಮವಾಗಿ ಅವರದ್ದೇ ಕುಟುಂಬದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಕೇಸ್ ವಿಚಾರವೂ ನಿಖಿಲ್​ಗೆ ಮೈನಸ್ ಆಗಿರಬಹುದು ಎನ್ನಲಾಗುತ್ತಿದೆ.

Ads on article

Advertise in articles 1

advertising articles 2

Advertise under the article