ಕೇವಲ 7 ರನ್ಗೆ ಆಲೌಟ್ ಆಗುವ ಮೂಲಕ ಟಿ20 ಕ್ರಿಕೆಟ್ನಲ್ಲಿ 'ಕಳಪೆ' ಹೊಸ ದಾಖಲೆ ಬರೆದ ತಂಡ !
ಟಿ20 ವಿಶ್ವಕಪ್ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಐವರಿ ಕೋಸ್ಟ್ ತಂಡವು ಕೇವಲ 7 ರನ್ಗೆ ಆಲೌಟ್ ಆಗಿದೆ. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಮೂಡಿಬಂದ ಅತ್ಯಂತ ಕಡಿಮೆ ಸ್ಕೋರ್ ಎಂಬುದು ವಿಶೇಷ. ಲಾಗೋಸ್ನಲ್ಲಿ ನಡೆದ ಈ ಪಂದ್ಯದಲ್ಲಿ ಆತಿಥೇಯ ನೈಜಿರೀಯಾ ಹಾಗೂ ಐವರಿ ಕೋಸ್ಟ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಟಾಸ್ ಗೆದ್ದ ನೈಜೀರಿಯಾ ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ನೈಜಿರೀಯಾ ತಂಡಕ್ಕೆ ಸೆಲಿಮ್ ಸಲಾವ್ ಹಾಗೂ ಸುಲೈಮಾನ್ ಅತ್ಯುತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 128 ರನ್ಗಳ ಜೊತೆಯಾಟವಾಡಿದ ಬಳಿಕ ಸುಲೈಮಾನ್ (50) ವಿಕೆಟ್ ಒಪ್ಪಿಸಿದರು.
ಮತ್ತೊಂದೆಡೆ ಸ್ಪೋಟಕ ಬ್ಯಾಟಿಂಗ್ ಮುಂದುವರೆಸಿದ ಸೆಲಿಮ್ ಸಲಾವ್ 53 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 13 ಫೋರ್ಗಳೊಂದಿಗೆ 112 ರನ್ಗಳ ಶತಕ ಸಿಡಿಸಿದರು. ಆ ಬಳಿಕ ಬಂದ ಐಸಾಕ್ ಒಕ್ಪೆ 23 ಎಸೆತಗಳಲ್ಲಿ 6 ಸಿಕ್ಸ್ಗಳೊಂದಿಗೆ 65 ರನ್ ಬಾರಿಸಿದರು. ಈ ಮೂಲಕ ನೈಜಿರೀಯಾ ತಂಡವು 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 271 ರನ್ ಕಲೆಹಾಕಿತು.
272 ರನ್ಗಳ ಕಠಿಣ ಗುರಿ ಬೆನ್ನತ್ತಿದ ಐವರಿ ಕೋಸ್ಟ್ ತಂಡದ ಬ್ಯಾಟರ್ಗಳು ಬಂದ ವೇಗದಲ್ಲೇ ಹಿಂತಿರುಗಿದ್ದರು. ಆರಂಭಿಕ ಆಟಗಾರ ಕೋನ ಅಜೀಜ್ ಅವರ ಶೂನ್ಯದೊಂದಿಗೆ ಆರಂಭವಾದ ಪೆವಿಲಿಯನ್ ಪರೇಡ್ ಪಂಬಾ ಡಿಮಿಟ್ರಿ ವಿಕೆಟ್ನೊಂದಿಗೆ ಅಂತ್ಯವಾಯಿತು. ಇದರ ನಡುವೆ ಐವರಿ ಕೋಸ್ಟ್ ತಂಡದ 7 ಬ್ಯಾಟರ್ಗಳು ಸೊನ್ನೆ ಸುತ್ತಿದ್ದರು.
ಪರಿಣಾಮ ಐವರಿ ಕೋಸ್ಟ್ ತಂಡವು 7.3 ಓವರ್ಗಳಲ್ಲಿ ಕೇವಲ 7 ರನ್ಗಳಿಸಿ ಆಲೌಟ್ ಆಯಿತು. ಈ ಮೂಲಕ ನೈಜಿರೀಯಾ ತಂಡವು 264 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಅಮೋಘ ಗೆಲುವಿನೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಬೃಹತ್ ರನ್ಗಳ ಅಂತರದಿಂದ ಗೆದ್ದ ದಾಖಲೆ ಪಟ್ಟಿಯಲ್ಲಿ ನೈಜಿರೀಯಾ ಮೂರನೇ ಸ್ಥಾನಕ್ಕೇರಿದೆ.
ಅತ್ಯಂತ ಕಳಪೆ ದಾಖಲೆ: ಐವರಿ ಕೋಸ್ಟ್ ತಂಡವು ಕೇವಲ 7 ರನ್ಗೆ ಆಲೌಟ್ ಆಗುವ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಕಡಿಮೆ ಸ್ಕೋರ್ಗೆ ಆಲೌಟ್ ಆದ ತಂಡ ಎನಿಸಿಕೊಂಡಿದೆ. ಇದಕ್ಕೂ ಮುನ್ನ ಈ ಹೀನಾಯ ದಾಖಲೆ ಮಂಗೋಲಿಯಾ ತಂಡದ ಹೆಸರಿನಲ್ಲಿತ್ತು.
ಸಿಂಗಾಪುರ ವಿರುದ್ಧದ ಪಂದ್ಯದಲ್ಲಿ ಕೇವಲ 10 ರನ್ಗೆ ಆಲೌಟ್ ಆಗಿ ಮಂಗೋಲಿಯಾ ಈ ಅನಗತ್ಯ ದಾಖಲೆ ನಿರ್ಮಿಸಿತ್ತು. ಇದೀಗ ಕೇವಲ 7 ರನ್ಗಳೊಂದಿಗೆ ಇನಿಂಗ್ಸ್ ಅಂತ್ಯಗೊಳಿಸುವ ಮೂಲಕ ಐವರಿ ಕೋಸ್ಟ್ ಈ ಕಳಪೆ ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.