ನಮ್ಮ ಸಂವಿಧಾನವನ್ನು ಒಪ್ಪದ ಪೇಜಾವರ ಸ್ವಾಮಿ ದೇಶ ಬಿಟ್ಟು ತೊಲಗಲಿ: ಜಯನ್ ಮಲ್ಪೆ
ಮಲ್ಪೆ: ನ್ಯಾಯ, ಸ್ವಾತಂತ್ರ್ಯ,ಸಮಾನತೆ ಮತ್ತು ಸೋದರತ್ವದ ತತ್ವಗಳ ಆಧಾರದ ಮೇಲೆ ರಚಿತವಾಗಿರುವ ನಮ್ಮ ಸಂವಿಧಾನವನ್ನು ಒಪ್ಪದ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮಿ ದೇಶ ಬಿಟ್ಟು ತೊಲಗಲಿ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಆಗ್ರಹಿಸಿದ್ದಾರೆ.
ಅವರು ಮಂಗಳವಾರ ಮಲ್ಪೆ ಸರಸ್ವತಿ ಬಯಲು ರಂಗಮಂದಿರದಲ್ಲಿ ಅಂಬೇಡ್ಕರ್ ಯುವಸೇನೆ ಆಯೋಜಿಸಿದ 75ನೇ ಸಂವಿಧಾನ ಸಮರ್ಪಣಾ ದಿನದ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡುತ್ತಾ, ಅಂಬೇಡ್ಕರ್ ಬರೆದ ಸಂವಿಧಾನ ಉಳಿದರೆ ಮಾತ್ರ ನಮ್ಮ ದೇಶದ ಸಮಗ್ರತೆ, ಸಂಸ್ಕೃತಿ ಮತ್ತು ಜನರ ಬದುಕು ಉಳಿಯುತ್ತದೆ. ನಮ್ಮ ಸಂವಿಧಾನವು ಎಲ್ಲಿಯವರೆಗೆ ಸುರಕ್ಷಿತವಾಗಿರುತ್ತದೆಯೋ ಅಲ್ಲಿಯವರೆಗೆ ನಾವೆಲ್ಲರು ಸುರಕ್ಷಿತವಾಗಿರುತ್ತೇವೆ. ಇಲ್ಲವೇ ನಾವೆಲ್ಲರೂ ನಾಶವಾಗುತ್ತೇವೆ ಎಂಬುದನ್ನು ಪೇಜಾವರ ಸ್ವಾಮಿ ಅರ್ಥಮಾಡಿಕೊಳ್ಳಲ್ಲಿ ಎಂದರು.
ಭಾರತವೆಂದರೆ ವೈದಿಕ ಹಿಂದೂ ದೇಶ ಮಾಡಲು ಹೊರಟಿರುವ ಪೇಜಾವರ ಸ್ವಾಮಿಜಿ ಈಗಿನ ಸಂವಿಧಾನ ಹೋಗಿ, ನಮ್ಮನ್ನು ಗೌರವಿಸುವ ಸಂವಿಧಾನ ಬರಬೇಕಾಗಿದೆ ಎನ್ನುವ ಮೂಲಕ ನಮ್ಮ ಸಂವಿಧಾನದ ಆಶಯಕ್ಕೆ ಗುಂಡು ಹೊಡೆದು ಈ ದೇಶವನ್ನು ನಾಶಮಾಡಲು ಸಂಚು ನಡೆಸಿದ್ದಾರೆ ಎಂದು ಜಯನ್ ಮಲ್ಪೆ ಆರೋಪಿಸಿದ್ದಾರೆ.
ಸ್ಥಾಪಕ ಅಧ್ಯಕ್ಷ ಹರೀಶ್ ಸಲ್ಯಾನ್ ಮಾತನಾಡಿ, ಅಂಬೇಡ್ಕರ್ ಭಾರತದಲ್ಲಿ ಜನಿಸದೇ ಇರುತ್ತಿದ್ದರೆ, ಇಂದು ಭಾರತದ ಪರಿಸ್ಥಿತಿ ಏನಾಗಿರುತ್ತಿತ್ತು ಎನ್ನುವುದನ್ನು ಯೋಚಿಸಲೂ ಸಾಧ್ಯವಾಗುತ್ತಿರಲಿಲ್ಲ. ಭಾರತದ ಬೀದಿಗಳಲ್ಲಿ ಚಿನ್ನ, ರತ್ನ, ವಜ್ರ, ವೈಢೂರ್ಯಗಳನ್ನು ಮಾರಾಟ ಮಾಡಲಾಗುತ್ತಿತ್ತು ಎನ್ನುವ ಇತಿಹಾಸ ಕೇಳಿದ್ದೇವೆ. ಆದರೆ ಅದೇ ಭಾರತದಲ್ಲಿ ಮನುಷ್ಯನನ್ನು ಮನುಷ್ಯನಂತೆ ಕಾಣಲಾಗುತ್ತಿರಲ್ಲಿಲ್ಲ ಎನ್ನುವ ಸತ್ಯವನ್ನೂ ನಾವು ಒಪ್ಪಿಕೊಂಡಿದ್ದೇವೆ. ಇಂದು ಭಾರತದಲ್ಲಿ ಇಷ್ಟರ ಮಟ್ಟಿಗೆ ಸಮಾನತೆ,ನೆಮ್ಮದಿ ಇದೆ ಎಂದರೆ ಅಂಬೇಡ್ಕರ್ ನೀಡಿದ ಸಂವಿಧಾನದಿಂದ ಮಾತ್ರ ಸಾಧ್ಯವಾಗಿದೆ ಎಂದರು.
ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಸಂವಿಧಾನದ ಅಡಿಯಲ್ಲಿ ನಮಗಿಷ್ಟ ಬಂದದ್ದನ್ನು ಮಾಡಲು ನಾವು ಬದ್ಧರಾಗಿದ್ದೇವೆ.ನಮ್ಮ ಮಾರ್ಗದರ್ಶರಾಗಿ ಅಂಬೇಡ್ಕರ್ ಇದ್ದಾರೆ.ನಮ್ಮ ಸಂವಿಧಾನ ವಿಫಲವಾಗಿಲ್ಲ.ನಾವು ಸಂವಿಧಾನವನ್ನು ವಿಫಲಗೊಳಿಸಿದ್ದೇವೆ. ಸಂವಿಧಾನದ ಸ್ಪೂರ್ತಿಯಂತೆ ನಾವು ನಡೆದುಕೊಳ್ಳುತ್ತಿಲ್ಲ.ನಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಸಂವಿಧಾನವನ್ನು ದೂಷಿಸುವುದು ಸಮಂಜಸವಲ್ಲ ಎಂದರು.
ದಲಿತ ಹಕ್ಕುಗಳ ಹೋರಾಟ ಸಮಿತಿಯ ಸಂಜೀವ ಬಳ್ಕೂರು ಮಾತನಾಡಿ ಸಂವಿಧಾನದ ಆಶಯವನ್ನು ಉಳಿಸದೇ ಹೋದರೆ ಈ ದೇಶಕ್ಕೆ ಗಂಡಾಂತರ ಕಟ್ಟಿಟ್ಟ ಬುತ್ತಿ. ನಮ್ಮನ್ನು ಆಳ್ವಿಕೆ ಮಾಡಿರುವ ಎಲ್ಲಾ ರಾಜಕೀಯ ಪಕ್ಷಗಳು ಈದೇಶವನ್ನು ಎಲ್ಲಿಂದ ಎಲ್ಲಿಗೆ ಕೊಂಡೊಯುತ್ತಿದ್ದಾರೆ ಎಂಬ ಸತ್ಯ ಸಂಗತಿಯನ್ನು ಪ್ರಜ್ಞಾವಂತ ಜನತೆಯ ಮುಂದಿಟ್ಟು ಸಂವಿಧಾನವನ್ನು ರಕ್ಷಿಸುವ ಹೊಣೆ ನಮ್ಮ ಮುಂದಿದೆ ಎಂದರು.
ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ಸಂತೋಷ್ ಕಪ್ಪೆಟ್ಟು, ರವಿ ಲಕ್ಷ್ಮೀನಗರ, ಸಾಧು ಚಿಟ್ಪಾಡಿ, ಮೋಹನ್ ಗುಜ್ಜರಬೆಟ್ಟು, ಬಿ,ಎನ್.ಪ್ರಶಾಂತ್, ದೀಪಕ್ ಕೊಡವೂರು, ಅರುಣ್ ಸಾಲ್ಯಾನ್, ಶಕಿಲ್ ಕಪ್ಪೆಟ್ಟು, ಪ್ರಸಾದ್ ಮಲ್ಪೆ, ಈಶ್ವರ್ ಗದಗ, ಜಯ ಸಾಲ್ಯಾನ್ ಪಾಳೆಕಟ್ಟೆ, ಸುಶೀಲ್ ಕೊಡವೂರು, ಸುನೀಲ್ ನೆರ್ಗಿ, ವಿನಯ ಕೊಡಂಕೂರು, ಅನಂತ್ ಕುಂದರ್ ನೆರ್ಗಿ, ಪ್ರಕಾಶ್ ಸಿಟಿಝನ್, ಭುವನ್ ಸ್ವಾಮಿ, ಪ್ರದೀಪ್ ನೆರ್ಗಿ, ಅಶೋಕ್ ಪುತ್ರನ್ ಮಲ್ಪೆ ಮುಂತಾದವರು ಭಾಗವಹಿಸಿದ್ದರು. ಭಗವನ್ ಮಲ್ಪೆ ಸ್ವಾಗತಿಸಿ, ಸತೀಶ್ ಕಪ್ಪೆಟ್ಟು ವಂದಿಸಿದರು.