ರಾಷ್ಟ್ರೀಕೃತ ಬ್ಯಾಂಕ್'ಗಳಲ್ಲಿ ಕನ್ನಡ ಭಾಷೆ ಗೊತ್ತಿರುವ ಅಧಿಕಾರಿಗಳನ್ನು ನೇಮಿಸಿ: ಬ್ಯಾಂಕ್'ಗಳಿಗೆ ಕೋಟ ಶ್ರೀನಿವಾಸ ಪೂಜಾರಿ ಸಲಹೆ
ಉಡುಪಿ: ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಕನ್ನಡ ಭಾಷಿಕ ಸಿಬ್ಬಂದಿಗಳನ್ನು ನೇಮಿಸಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಬ್ಯಾಂಕ್ ಅಧಿಕಾರಿಗಳಿಗೆ ಕೋಟ ಶ್ರೀನಿವಾಸ ಪೂಜಾರಿ ಸಲಹೆ ನೀಡಿದ್ದಾರೆ.
ಅವರು ಶುಕ್ರವಾರ ಉಡುಪಿ ಜಿಲ್ಲಾ ಆಡಳಿತ ಕೇಂದ್ರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾ ಅಗ್ರಣಿ ಬ್ಯಾಂಕ್ ಕೆನರಾ ಬ್ಯಾಂಕ್ ನೇತೃತ್ವದಲ್ಲಿ ನಡೆದ ಪಿಎಂ ವಿಶ್ವಕರ್ಮ ಯೋಜನೆ, ಸ್ವನಿಧಿ, ಮುದ್ರಾ ಮತ್ತು ಕೇಂದ್ರಸರಕಾರದ ಇತರ ಸಾಲ ಯೋಜನೆಗಳ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್ಗಳು ಜನಸಾಮಾನ್ಯರ ಬ್ಯಾಂಕ್ ಆಗಿರಬೇಕು. ಆದರೆ ಸ್ಥಳೀಯ ಭಾಷಿಕರಲ್ಲದ ಸಿಬ್ಬಂದಿಗಳನ್ನು ನೇಮಿಸಿ ಜನಸಾಮಾನ್ಯರಿಂದ ದೂರವಾಗುತ್ತಿದೆ. ಈ ಬಗ್ಗೆ ಕೇಂದ್ರ ಹಣಕಾಸು ಮಂತ್ರಿಗಳಿಗೆ ಪತ್ರ ಬರೆದಿದ್ದು, ಹೊರ ರಾಜ್ಯದ ಸಿಬ್ಬಂದಿಗಳಾದರೂ ಅವರು ಸ್ಥಳೀಯ ಭಾಷೆಯನ್ನು ಕಲಿತ ಬಳಿಕ ನೇಮಿಸಿ ಇದರಿಂದ ಸಾರ್ವಜನಿಕರಿಗೆ ಉಪಯೋಗವಾಗುತ್ತದೆ ಎಂದರು.
ಪಿಎಂ ವಿಶ್ವಕರ್ಮ ಯೋಜನೆ 18 ಕುಲಕಸುಬುಗಳಿಗೆ ಶಕ್ತಿ ತುಂಬುವ ಯೋಜನೆ ಇದಾಗಿದ್ದು, 12ಸಾವಿರ ಕೋಟಿ ರೂ.ಗಳನ್ನು ಕೇಂದ್ರ ಸರಕಾರ ಮೀಸಲಿರಿಸಿದೆ. ಉಡುಪಿ ಜಿಲ್ಲೆಯಲ್ಲಿ 17 ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದು 8022 ಅರ್ಜಿಗಳು ಶಿಫಾರಸ್ಸುಗೊಂಡು 6338 ಅರ್ಜಿಗಳು ಶಿಫಾರಸ್ಸುಗೊಳ್ಳಲು ಬಾಕಿ ಇದೆ. 6338 ಅರ್ಜಿಗಳು ರಾಜ್ಯ ಸಮಿತಿಯಿಂದ ಅನುಮೋಧನೆಗೊಂಡಿದ್ದು, 9 ನೋಂದಾಯಿತ ಸಂಸ್ಥೆಗಳ್ ತರಬೇತಿಯನ್ನು ನೀಡಲಾಗುತ್ತಿದೆ. ಉದ್ಯೋಗ ಸೃಜನಾ ಯೋಜನೆಯಡಿ 203 ಫಲಾನುಭವಿಗಳಿಗೆ 2113.22ಲಕ್ಷ ರೂ. ಸಾಲವನ್ನು ಮಂಜೂರಾಗಿದೆ. ಮುದ್ರಾ ಯೋಜನೆಯಡಿ 18521 ಫಲಾನುಭವಿಗಳಿಗೆ 306.42 ಕೋಟಿ ಸಾಲ ವಿತರಿಸಲಾಗಿದೆ. ಸ್ವನಿಧಿ ಯೋಜನೆಯಡಿ, 4779 ಮಂದಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ್ದು, 4690 ಫಲಾನುಭವಿಗಳಿಗೆ ಪ್ರಥಮ ಹಂತದಲ್ಲಿ 4.68 ಕೋಟಿ ಸಾಲ ಮಂಜೂರಾಗಿದೆ. ದ್ವಿತೀಯ ಹಂತದಲ್ಲಿ 3077 ಅರ್ಜಿ ಸ್ವೀಕರಿಸಲಾಗಿದ್ದು, 2853ಫಲಾನುಭವಿಗಳಿಗೆ 5.70 ಕೋಟಿ ಸಾಲ ಮಂಜೂರಾಗಿದೆ. ಮೂರನೇ ಹಂತದಲ್ಲಿ 1045 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 845 ಫಲಾನುಭವಿಗಳಿಗೆ 5.70 ಕೋಟ ಸಾಲ ಮಂಜೂರಾಗಿದೆ ಎಂದು ಮಾಹಿತಿ ನೀಡಿದರು. ಒಂಬತ್ತು ತರಬೇತಿ ಸಂಸ್ಥೆಗಳಲ್ಲಿ 6 ತರಬೇತಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು ಇನ್ನೂ ಮೂರು ಸಂಸ್ಥೆಗಳು ಕಾರ್ಯಾಚರಣೆ ನಡೆಸಬೇಕಾಗಿದೆ. ಅಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಿ ಶೀಘ್ರ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.
ಈ ಸಂದರ್ಭ ಸಾಲ ಮಂಜೂರಾತಿ ಪತ್ರಗಳನ್ನು, ಕೌಶಲಾಭಿವೃದ್ಧಿ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಉಡುಪಿ ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಮಾತನಾಡಿ, ಯಾರು ಸಾಂಪ್ರದಾಯಿಕ ಮಾದರಿಯಲ್ಲಿ ಉದ್ಯೋಗವನ್ನು ಮಾಡಿಕೊಂಡು ಬಂದಿದ್ದಾರೆ ಅವರಿಗೆ ತರಬೇತಿ ನೀಡಿ ಅವರ ಕೌಶಲ್ಯವನ್ನು ಉನ್ನತೀಕರಿಸುವುದು ಈ ಯೋಜನೆಯ ಉದ್ದೇಶ. ನೀವು ಕೌಶಲ್ಯಾಭಿವೃದ್ಧಿ ಹೊಂದುವುದರೊಂದಿಗೆ ನಿಮ್ಮೊಂದಿಗೆ ಇನ್ನೂ ನಾಲ್ಕು ಮಂದಿಗೆ ಉದ್ಯೋಗ ಸೃಷ್ಟಿಸಬೇಕು ಎನ್ನುವುದು ಗುರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ಕಿರಣ್ ಕುಮಾರ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರತಿಕ್ ಬಾಯಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ಕೆನರಾ ಬ್ಯಾಂಕ ಮಹಾಪ್ರಬಂಧಕ ಜಯಪ್ರಕಾಶ್ ಮೊದಲಾದವರು ಇದ್ದರು.
ಕಾರ್ಯಕ್ರಮವನ್ನು ಪ್ರಶಾಂತ್ ಹಾವಂಜೆ ನಿರೂಪಿಸಿದರು. ಅಗ್ರಣಿ ಬ್ಯಾಂಕ್ನ ಪ್ರಬಂಧಕ ಹರೀಶ್ ಸ್ವಾಗತಿಸಿದರು.