ಮೋದಿ ಸರಕಾರಕ್ಕೆ ಬೆಂಬಲ ನೀಡಿ ವಕ್ಫ್ ಕಾಯ್ದೆ ಪಾಸಾದರೆ ಮುಂದೆ ನೀವೇ ಅದರ ಪರಿಣಾಮ ಅನುಭವಿಸ್ತೀರಾ!: ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡುಗೆ ಮೌಲಾನಾ ಅರ್ಷದ್ ಮದನಿ ಎಚ್ಚರಿಕೆ
ನವದೆಹಲಿ: ವಕ್ಫ್ ಬೋರ್ಡ್ ತಿದ್ದುಪಡಿ ಕುರಿತು ಪ್ರತಿಕ್ರಿಯಿಸಿರುವ ಜಮಿಯತ್-ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ, ಪ್ರಸ್ತುತ ದೇಶದಲ್ಲಿ ಮತೀಯ ಮನಸ್ಥಿತಿ ಇದೆ. ವಕ್ಫ್ ಮಸೂದೆ ಪ್ರಮುಖ ವಿಷಯವಾಗಿದೆ. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬೆಂಬಲ ನೀಡಿದ್ದು ವಕ್ಫ್ ಕಾಯ್ದೆ ಪಾಸಾದರೆ ಅದರ ಪರಿಣಾಮವನ್ನು ನೀವು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ದೆಹಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ನಡೆದ ಜಮೀಯತ್-ಉಲೇಮಾ-ಎ-ಹಿಂದ್‌ನ ಸಂವಿಧಾನ ಸಂರಕ್ಷಣಾ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೌಲಾನಾ ಅರ್ಷದ್ ಮದನಿ, ಈ ಎರಡು ಪಕ್ಷಗಳಿಗೆ ನಾನು ಸವಾಲು ಹಾಕುತ್ತೇನೆ. ಮುಸ್ಲಿಮರ ಭಾವನೆಗಳು ಇದಕ್ಕೆ ಎಷ್ಟು ಸಂಬಂಧಿಸಿವೆ ಎಂಬುದನ್ನು ಅವರು ತಮ್ಮ ಬಂಗಲೆಗಳಲ್ಲಿ ಕುಳಿತು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ದೇಶದ ಜನತೆ ಬಿಜೆಪಿಯನ್ನು ಸೋಲಿಸಿದ್ದರು. ಆದರೆ ಬಿಜೆಪಿ ಸರಕಾರ ಎರಡು ಊರುಗೋಲಿನಿಂದ ನಡೆಯುತ್ತಿದೆ. ನಾಯ್ಡು ಸಾಹೇಬರೇ ಈ ತಿಂಗಳ ಅಂತ್ಯದೊಳಗೆ ಅಥವಾ ಡಿಸೆಂಬರ್‌ನಲ್ಲಿ ಚಂದ್ರಬಾಬು ನಾಯ್ಡು ಅವರ 'ಏರಿಯಾ'ದಲ್ಲಿ ಸುಮಾರು ಐದು ಲಕ್ಷ ಮುಸ್ಲಿಮರನ್ನು ಸೇರಿ ನಮ್ಮ ತಾಕತ್ತನ್ನು ಪ್ರದರ್ಶಿಸುತ್ತೇವೆ. ಜೊತೆಗೆ ಮುಸ್ಲಿಮರ ಭಾವನೆಗಳನ್ನು ಅವರ ಮುಂದೆ ಎಳೆಎಳೆಯಾಗಿ ಮಂಡಿಸುತ್ತೇವೆ ಎಂದರು.
ವಕ್ಫ್ ಕಾಯ್ದೆ ಪಾಸಾದರೆ ದೇಶವನ್ನು ಆಳುತ್ತಿರುವ ಬಿಜೆಪಿಯ ಊರುಗೋಲುಗಳೂ ಹೊಣೆಯಾಗುತ್ತವೆ ಎಂದು ಅರ್ಷದ್ ಮದನಿ ಟಿಡಿಪಿ ಮತ್ತು ಜೆಡಿಯುಗೆ ಎಚ್ಚರಿಕೆ ನೀಡಿದರು. ಈ ಮಸೂದೆಯಲ್ಲಿ ಮುಸ್ಲಿಮರಿಗೆ ತೊಂದರೆಯಾಗುವ ವಿಷಯವಿದೆ. ನವೆಂಬರ್ 24ರಂದು ಜಮಿಯತ್-ಉಲೇಮಾ-ಎ-ಹಿಂದ್, ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಪಾಟ್ನಾದಲ್ಲಿ ಜಮಿಯತ್ ದೊಡ್ಡ ರ್ಯಾಲಿಯನ್ನು ಆಯೋಜಿಸುತ್ತದೆ ಎಂದು ಹೇಳಿಕೊಂಡಿದೆ. ಇದರಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಕೂಡ ಭಾಗವಹಿಸಲಿದ್ದಾರೆ ಎಂದರು.
2024ರ ಅಕ್ಟೋಬರ್ 2ರಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಮುಸ್ಲಿಂರು ವಕ್ಫ್ ಮಸೂದೆಯಲ್ಲಿ ತಿದ್ದುಪಡಿಗಳನ್ನು ಬಯಸದಿದ್ದರೆ, ಅದನ್ನು ಬದಿಗಿಡಬೇಕು ಎಂದು ಹೇಳಿತ್ತು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಐಎಂಪಿಬಿ ಪ್ರಧಾನ ಕಾರ್ಯದರ್ಶಿ ಮೌಲಾನಾ ಮೊಹಮ್ಮದ್ ಫಜಲುರಹೀಂ ಮುಜಾದಿದಿ, ಕೇವಲ 13 ದಿನಗಳಲ್ಲಿ 3.66 ಕೋಟಿಗೂ ಹೆಚ್ಚು ಮುಸ್ಲಿಮರು ಇಮೇಲ್ ಮೂಲಕ ವಕ್ಫ್ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಯಾವಾಗ ಮುಸ್ಲಿಮರು ಈ ಮಸೂದೆಯನ್ನು ಬಯಸುವುದಿಲ್ಲವೋ ಆಗ ಸರ್ಕಾರ ಅದನ್ನು ನಿರ್ಲಕ್ಷಿಸಬೇಕು ಎಂದು ಹೇಳಿದ್ದರು.